ಹುಬ್ಬಳ್ಳಿ (ನ.19):  ಈ ಭಾಗದ ಜನರ ಬಹು ದಿನಗಳ ಕನಸು ನನಸಾಗಿದ್ದು, ಹುಬ್ಬಳ್ಳಿ ಜಂಕ್ಷನ್‌ ರೈಲು ನಿಲ್ದಾಣ ಇನ್ನು ಮುಂದೆ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಹುಬ್ಬಳ್ಳಿ ಎಂದಾಗಲಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಇದು ಹುಬ್ಬಳ್ಳಿಯ ಆರಾಧ್ಯದೈವ ಶ್ರೀ ಸಿದ್ಧಾರೂಢರ ಭಕ್ತರಿಗೆ ಸಂತಸದ ಸುದ್ದಿ.

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಗೆಜೆಟ್‌ಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಪದಬರಿಗೆ (ಸ್ಪೆಲ್ಲಿಂಗ್‌) ಗೆಜೆಟ್‌ ಹೊರಡಿಸಿದ್ದಕ್ಕೆ ಹಾಗೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಬ್ಬರು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಆರೂಢ ಭಕ್ತರ ದಶಕದ ಕನಸು ನನಸಾದಂತಾಗಿದೆ.

ಈ ಭಾಗದ ಜನರ ಬೇಡಿಕೆ ಈಡೇರಿಸಿದ ಕೇಂದ್ರ: ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು ...

ದಶಕದ ಹೋರಾಟ:  ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಬೇಕೆನ್ನುವುದು ದಶಕದ ಹೋರಾಟ. 2010ರಿಂದಲೇ ಭಕ್ತರು, ಜನಪ್ರತಿನಿಧಿಗಳು, ಮಠದ ಟ್ರಸ್ಟ್‌ ಕಮಿಟಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು. ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಸುರೇಶ ಪ್ರಭು, ಈಗಿನ ಪಿಯೂಷ ಗೋಯಲ್‌ ಎಲ್ಲರಿಗೂ ಮನವಿ ಸಲ್ಲಿಸಲಾಗಿತ್ತು.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಮಠದ ಭಕ್ತರು ಆಗಿದ್ದರು. ಅವರು ಸಚಿವರಾದ ಮೇಲೆ ಇದಕ್ಕೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ತಕ್ಕಂತೆ ಸುರೇಶ ಅಂಗಡಿ ಇದಕ್ಕಾಗಿ ಸಾಕಷ್ಟುಪ್ರಯತ್ನ ಪಟ್ಟಿದ್ದರು. ಅದರಿಂದಾಗಿ 2020 ರ ಸೆ. 9 ರಂದು ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಲು ಒಪ್ಪಿಗೆ ಸೂಚಿಸಿ ನೋಟಿಪೀಕೇಶನ್‌ ಹೊರಡಿಸಲು ಸೂಚನೆ ನೀಡಿತ್ತು.