ಹುಬ್ಬಳ್ಳಿ(ಮಾ.19): ಕೊರೋನಾ ಭೀತಿ ಇದೀಗ ಪ್ರವಚನಕ್ಕೂ ತಟ್ಟಿದಂತಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನವನ್ನು ಇಂದಿನಿಂದ(ಮಾ. 19)ರಿಂದ ರದ್ದುಗೊಳಿಸಲಾಗಿದೆ. ಈ ಬಗ್ಗೆ ಪ್ರವಚನ ಸೇವಾ ಸಮಿತಿಯೇ ನಿರ್ಧರಿಸಿದೆ. ಇದರಿಂದಾಗಿ 13 ದಿನಗಳ ಮೊದಲೇ ಶ್ರೀಗಳ ಪ್ರವಚನ ಮೊಟಕುಗೊಳಿಸಿದಂತಾಗಿದೆ.

ತಾಲೂಕಿನ ಗೋಕುಲ ಗ್ರಾಮದಲ್ಲಿ ಮಾ. 1ರಿಂದ ಸಿದ್ಧೇಶ್ವರ ಶ್ರೀಗಳ ಪ್ರವಚನ ನಡೆಯುತ್ತಿತ್ತು. ಪ್ರತಿನಿತ್ಯ ಬೆಳಗ್ಗೆ 6.30ರಿಂದ 7.30ರ ವರೆಗೆ ನಡೆಯುತ್ತಿದ್ದ ಪ್ರವಚನಕ್ಕೆ ಕನಿಷ್ಠ 10-12 ಸಾವಿರ ಜನ ಸೇರುತ್ತಿದ್ದರು. ಇದೀಗ ಸರ್ಕಾರ 100ಗಿಂತ ಹೆಚ್ಚು ಜನ ಒಂದೆಡೆ ಸೇರಬೇಡಿ ಎಂಬ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಪ್ರವಚನವನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಬಂಧ ಕನ್ನಡಪ್ರಭದೊಂದಿಗೆ ಪ್ರವಚನ ಸೇವಾ ಸಮಿತಿ ಮಹೇಶ ದ್ಯಾವಕ್ಕನವರ ಮಾತನಾಡಿ, ಶ್ರೀಗಳ ಪ್ರವಚನವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ನಮಗೇನು ಸರ್ಕಾರದ ಯಾವ ಅಧಿಕಾರಿಗಳು ರದ್ದುಪಡಿಸಿ ಎಂದು ಸೂಚನೆ ನೀಡಿಲ್ಲ. ಆದರೆ ಸರ್ಕಾರ ಬಹಿರಂಗವಾಗಿ ಎಲ್ಲರಿಗೂ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗೆ ಸಹಕಾರ ನೀಡಬೇಕೆಂಬ ಉದ್ದೇಶದಿಂದ ಪ್ರವಚನವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.