ಧಾರವಾಡದ ಸಿದ್ದೇಶ್ವರ ನಗರದಲ್ಲಿ 80 ಸೋಂಕಿತರು: ಸೀಲ್‌ಡೌನ್
* ಎರಡು ದಿನಗಳಲ್ಲಿ ದಾಖಲಾದ ಪ್ರಕರಣ, ಇಡೀ ಕಾಲನಿ ಸ್ಯಾನಿಟೈಜ್
* ಕಾಲನಿಯಲ್ಲಿನ ಎಲ್ಲರಿಗೂ ಕೋವಿಡ್ ಟೆಸ್ಟ್
* ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗುವಂತೆ ಜಾಗೃತಿ
ಧಾರವಾಡ(ಮೇ.24): ಇಲ್ಲಿಯ ಲಕಮನಹಳ್ಳಿ ಗ್ರಾಮ ವ್ಯಾಪ್ತಿಯ, ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸಿದ್ದೇಶ್ವರನಗರದಲ್ಲಿ ಕಳೆದ ಎರಡು ದಿನಗಳಲ್ಲಿ 80ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಲನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಬಳಸಿ ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಭಾನುವಾರ ಸಿದ್ದೇಶ್ವರ ಕಾಲನಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಕಾಲನಿಯ ಕೆಲವರು ಕೋವಿಡ್ ಪಾಸಿಟಿವ್ ಬಂದರೂ ಕೋವಿಡ್ ಕಾಳಜಿ ಕೇಂದ್ರಗಳಿಗೆ ಹೋಗಲು ನಿರಾಕರಿಸಿದರು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಸಂತೋಷ ಬಿರಾದಾರ ಹಾಗೂ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಅವರು ಕಾಲನಿ ಪ್ರಮುಖರಿಗೆ ಹಾಗೂ ಸೋಂಕಿತರ ಕುಟುಂಬದ ಸದಸ್ಯರಿಗೆ ಮಾಹಿತಿ, ತಿಳಿವಳಿಕೆ ನೀಡಿ, ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗುವಂತೆ ಜಾಗೃತಿ ಮೂಡಿಸಿದರು.
"
ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಮೊದಲ ಬಲಿ
ಸಿದ್ದೇಶ್ವರ ಕಾಲನಿಯಲ್ಲಿ ಸುಮಾರು 130 ಮನೆಗಳಿದ್ದು, ಅಂದಾಜು 800 ಜನ ವಾಸಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯು ಕಾಲನಿಯಲ್ಲಿನ ಎಲ್ಲರಿಗೂ ಇದೀಗ ಕೋವಿಡ್ ಟೆಸ್ಟಿಂಗ್ ಕಾರ್ಯ ಕೈಗೊಂಡಿದ್ದಾರೆ. ಜತೆಗೆ ಸೋಂಕಿತರು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾದ ಆನಂತರ ಮಹಾನಗರ ಪಾಲಿಕೆಯ ಸಿಬ್ಬಂದಿ ಸಿದ್ದೇಶ್ವರನಗರವನ್ನು ರಾಸಾಯನಿಕ ಸಿಂಪಡಿಸಿ, ಸ್ಯಾನಿಟೈಸ್ ಮಾಡಿದರು. ಅಲ್ಲದೇ ಬ್ಯಾರಿಕೇಡಿಂಗ್ ಮಾಡಿ, ರಸ್ತೆಗಳನ್ನು ಬಂದ್ ಮಾಡಲಾಗಿದೆ.
ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಬಸಾಪುರ, ಕಂದಾಯ ನಿರೀಕ್ಷಕ ಮಂಜುನಾಥ ಗೂಳಪ್ಪನವರ, ಗ್ರಾಮಲೆಕ್ಕಾಧಿಕಾರಿ ಸೈಯದ ಬನ್ನಿಮಟ್ಟಿ, ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.