ಮೈಸೂರು(ಡಿ.28): ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ತಿರಸ್ಕರಿಸಿದವರು ಯಾರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಸವಾಲು ಹಾಕಿದ್ದಾರೆ.

ಮೈತ್ರಿ ಸರ್ಕಾರ ರಚನೆ ವೇಳೆ ಮುಖ್ಯಮಂತ್ರಿ ಆಗಲು ಒಪ್ಪಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಹೈಕಮಾಂಡ್‌ಗೆ ತಿಳಿಸದಂತೆ ನನ್ನ ಕೈಹಿಡಿದವರಾರು ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೇಳಿಕೆ ಬಗ್ಗೆ ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಈ ರೀತಿಯಾಗಿ ಉತ್ತರಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ತಿರಸ್ಕರಿಸಿದ್ದು ನಾನಂತೂ ಅಲ್ಲ. ಖರ್ಗೆಯವರ ಹೆಸರನ್ನು ಯಾರು ತಿರಸ್ಕಾರ ಮಾಡಿದರು ಎಂದು ಅವರ ಹೆಸರನ್ನು ಹೇಳಲಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಆಪ್ತನನ್ನ ಜೆಡಿಎಸ್‌ಗೆ ಕರೆತರಲು ಕುಮಾರಸ್ವಾಮಿ ಯತ್ನ..!

ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ದೇವೇಗೌಡರ ಹೇಳಿಕೆಗೂ ಪ್ರತಿಕ್ರಿಯಿಸಿ, ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ ಎಂದು ಪ್ರಶ್ನಿಸಿದರು. ದೇವೇಗೌಡರು ಪಾಪ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಎಂದುಕೊಂಡಿದ್ದೀನಿ. 1999ರಲ್ಲಿ ಜೆಡಿಎಸ್‌ ಅಧ್ಯಕ್ಷರಾಗಿದ್ದವರು ಯಾರು? 6 ವರ್ಷಗಳ ಕಾಲ ಜೆಡಿಎಸ್‌ ಅಧ್ಯಕ್ಷನಾಗಿದ್ದು ನಾನು ಎಂದರು.