ಮೈಸೂರು(ಜ.14): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಾದ ಸೋಲಿನಿಂದ ನಾನು ಇನ್ನೂ ಆಚೆಗೆ ಬಂದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನ್ನ ಸೋಲು ಸರಿಯೇ? ಎಂದು ಪ್ರತಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ನಗರದ ಅಶ್ವಿನಿ ಕಲ್ಯಾಣಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿಗ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಇನ್ನು ಸೋಲಿನಿಂದ ಆಚೆಗೆ ಬಂದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಪರ್ಧಿಸಿದ್ದೆ. ನಾನು ಮುಖ್ಯಮಂತ್ರಿಯಾಗಲು ನಿಮ್ಮ ಕೊಡುಗೆ ಇದೆ. ನಾನು ವರುಣ ಕ್ಷೇತ್ರದಲ್ಲೇ ನಿಂತು ಗೆಲ್ಲುತ್ತಿದ್ದೆ. ಚುನಾವಣೆ ಪ್ರಾರಂಭಿಸಿ ಅದೇ ಕ್ಷೇತ್ರದಲ್ಲಿ ಕೊನೆಯ ಚುನಾವಣೆ ಸ್ಪರ್ಧಿಸಬೇಕು ಎಂದು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದ್ದೆ. ಆದರೆ ನನ್ನ ಸೋಲು ಸರಿಯೇ? ಎಂದು ಪ್ರಶ್ನಿಸಿದರು.

ಸಂಪುಟ ವಿಸ್ತರಣೆ ಆದ ನಂತರ ಬಿಎಸ್‌ವೈ ರಾಜೀನಾಮೆ: ಸಿದ್ದು

ಮೈಸೂರಲ್ಲೇ ಉಳಿಯುತ್ತೇನೆ:

ಒಂದು ಕಾಲದಲ್ಲಿ ಜನರೇ ನನಗೆ ದುಡ್ಡು ಕೊಟ್ಟು ಗೆಲ್ಲಿಸಿದರು. ವೀಳ್ಯದೆಲೆ ಮೇಲೆ ಹಣ ಕೊಟ್ಟು ಜನರೇ ನನಗೆ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಉಳಿದ ಹಣದಲ್ಲಿ ಒಂದು ಮನೆಯನ್ನು ಕಟ್ಟಿಕೊಟ್ಟರು. ಎರಡು ಮನೆ ಕಟ್ಟಿ ಎರಡನ್ನೂ ಮಾರಾಟ ಮಾಡಿದೆ. ಈಗ ಹೊಸ ಮನೆ ಕಟ್ಟುತ್ತಿದ್ದೇನೆ. ಯಾಕೆಂದರೆ ರಾಜಕಾರಣ ಮುಗಿದ ಮೇಲೆ ಮೈಸೂರಿನಲ್ಲೇ ಉಳಿಬೇಕಲ್ಲ ಅದಕ್ಕೆ ಮೈಸೂರಿನಲ್ಲಿ ಈಗ ಮನೆ ಕಟ್ಟುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.