ಜಾತಿ ಸಮೀಕ್ಷೆ ವರದಿ ಸ್ವೀಕರಿಸದಂತೆ ಎಚ್‌ಡಿಕೆ ಅಡ್ಡಿ: ಸಿದ್ದರಾಮಯ್ಯ

ಎಚ್‌ಡಿಕೆ ಅಡ್ಡಿಪಡಿಸದಿದ್ದರೆ ಅಂದೇ ವರದಿ ಸ್ವೀಕರಿಸುತ್ತಿದ್ದೆ: ಪುಟ್ಟರಂಗಶೆಟ್ಟಿ| ನನ್ನ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ 162 ಕೋಟಿ ರು. ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ: ಸಿದ್ದರಾಮಯ್ಯ| 

Siddaramaiah Talks Over Caste Survey Report grg

ಮೈಸೂರು/ಚಾಮರಾಜನಗರ(ಡಿ.28): ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಜಾತಿವಾರು ಸಮೀಕ್ಷಾ ವರದಿಯನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ಸ್ವೀಕರಿಸಲು ಅಡ್ಡಿಪಡಿಸಿದರೆಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. 

ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ, ಶಾಸಕ ಸಿ.ಪುಟ್ಟರಂಗ ಶೆಟ್ಟಿಸಹ ನಾನು ಹಿಂದುಳಿದ ವರ್ಗಗಳ ಸಚಿವನಾಗಿದ್ದಾಗ ಸಭೆ ಮಾಡದಂತೆ, ಸಮೀಕ್ಷಾ ವರದಿ ಸ್ವೀಕರಿಸದಂತೆ ಹೆದರಿಸಿದ್ದರು ಎಂದು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಾತಿ ಗಣತಿಯ ವರದಿ ಸ್ವೀಕಾರ ಮಾಡದಂತೆ ಕುಮಾರಸ್ವಾಮಿ ಹೆದರಿಸಿದ್ದರು. ಕುಮಾರಸ್ವಾಮಿ ಏಕೆ ವರದಿ ಪಡೆಯಲು ಹಿಂದೇಟು ಹಾಕಿದರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಜಿ ಸಚಿವ ಪುಟ್ಟರಂಗಶೆಟ್ಟಿಸತ್ಯವನ್ನೇ ಹೇಳಿದ್ದಾರೆ ಎಂದರು.

ಎಸ್‌ಟಿ ಹೋರಾಟಕ್ಕೆ ಸಿದ್ದು ಬೆಂಬಲ ಕೂಡ ಇದೆ: ಎಚ್‌.ವಿಶ್ವನಾಥ್‌

ಯಳಂದೂರು ತಾಲೂಕು ಉಪ್ಪಿನಮೋಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಂಗ ಶೆಟ್ಟಿ, ಒಬ್ಬ ಮುಖ್ಯಮಂತ್ರಿ ಹೇಳಿದ ಮೇಲೆ ಅವರ ಮಾತಿಗೆ ಗೌರವ ಕೊಡಬೇಕು ಅನ್ನೋ ಕಾರಣಕ್ಕೆ ನಾನು ಅಂದಿನ ನಡೆಸಲುದ್ದೇಶಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಸಭೆಯನ್ನು ರದ್ದುಮಾಡಿದೆ. ಇಲ್ಲದಿದ್ದರೆ ಅಂದೇ ವರದಿ ಸ್ವೀಕರಿಸುತ್ತಿದ್ದೆ ಎಂದು ಹೇಳಿದರು.

ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ 162 ಕೋಟಿ ರು. ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ಅದು ಎಚ್‌.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಅದರ ವರದಿ ಪೂರ್ಣಗೊಂಡಿತ್ತು. ಆದರೆ ಕುಮಾರಸ್ವಾಮಿ ಅವರು ಪುಟ್ಟರಂಗಶೆಟ್ಟಿಗೆ ಕರೆ ಮಾಡಿ ವರದಿ ಸ್ವೀಕರಿಸದಂತೆ ಹೆದರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.
 

Latest Videos
Follow Us:
Download App:
  • android
  • ios