ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ
ಬಿಎಸ್‌ವೈ ಕೂತಿರೋ ಹಡಗು ಮುಳುಗುತ್ತಿದೆ| ಅವರದೇ ಪಕ್ಷದ ಯತ್ನಾಳ್ ಕಿಡಿ ಕಾರ್ತಿದ್ದಾರಲ್ಲ| ಯಡಿಯೂರಪ್ಪ ಅವರು ಮನೆಗೆ ಹೋಗಲಿದ್ದಾರೆ| ಕಾಂಗ್ರೆಸ್ ಉಪ ಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ: ಸಿದ್ದರಾಮಯ್ಯ|
ಸಿಂಧನೂರು/ರಾಯಚೂರು(ಏ.12): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂತಿರುವ ಹಡಗು ಮುಳುಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಸ್ಕಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಯಡಿಯೂರಪ್ಪರ ಹಡಗು ಮುಳುಗುತ್ತಿದೆ. ಅವರದ್ದೇ ಪಕ್ಷದ ಶಾಸಕ ಬಸನಗೌಡ ಯತ್ನಾಳ ಅವರು ಮುಖ್ಯಮಂತ್ರಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಯಡಿಯೂರಪ್ಪ ಮನೆಗೆ ಹೋಗುತ್ತಾರೆ ಎಂದರು.
ದಲಿತರ ಮನೆಯಲ್ಲಿ ಹೋಳಿಗೆ, ಹುಗ್ಗಿ ಸವಿದ ಸಿಎಂ ಯಡಿಯೂರಪ್ಪ
ಸಾಮಾಜಿಕ ನ್ಯಾಯದ ವಿರುದ್ಧ:
ಬಿಜೆಪಿ ಸಾಮಾಜಿಕ ನ್ಯಾಯದ ಕುರಿತು ಯಾವತ್ತೂ ಆಲೋಚಿಸಿಲ್ಲ. ಮೇಲ್ವರ್ಗದ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಮೀಸಲಾತಿಗೆ ವಿರುದ್ಧವಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಎಸ್‌ಇಪಿ, ಟಿಎಸ್‌ಪಿ ಯೋಜನೆಗೆ ಪ್ರತಿವರ್ಷ 30 ಸಾವಿರ ಕೋಟಿಯಂತೆ ಐದು ವರ್ಷಕ್ಕೆ 86 ಸಾವಿರ ಕೋಟಿ ನೀಡಲಾಗಿತ್ತು. ಆದರೆ ಈಗಿನ ಯಡಿಯೂರಪ್ಪ ಸರ್ಕಾರ ವರ್ಷಕ್ಕೆ 26 ಸಾವಿರ ಕೋಟಿ ಮಾತ್ರ ನೀಡುತ್ತಿದ್ದು, 4 ಸಾವಿರ ಕೋಟಿ ಕಡಿತಗೊಳಿಸಿದೆ. ಈ ಬಗ್ಗೆ ಸಚಿವ ಶ್ರೀರಾಮುಲು ಅಸಹಾಯಕರಾಗಿರುವುದು ಏಕೆ? ಅವರಿಗೆ ವಿರೋಧಿಸುವ ತಾಕತ್ತು ಇಲ್ಲವೆಂದರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಉಪ ಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯವರು ಇದೀಗ ಇಡೀ ಸರ್ಕಾರವನ್ನು ಯಾಕೆ ಬಂದು ಕೂರಿಸಿದೆ. ಉಪ ಚುನಾವಣೆ ನಂತರ ಕಾಂಗ್ರೆಸ್ ವಿಳಾಸವೇ ಇರಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದು ಹಾಸ್ಯಾಸ್ಪದ, ಬಾಲಿಷ ಹೇಳಿಕೆ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಉಪ ಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.