ಮೈಸೂರು (ಡಿ.05): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಸಂಬೋಧಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಬಹುವಚನದಲ್ಲಿ ಮಾತನಾಡಿಸಿ ದೇವರಾಜ್‌ ಅರಸ್‌ ಅವರಂತೆ ಎಲ್ಲರನ್ನೂ ಗೌರವಿಸುವುದನ್ನು ಕಲಿಯಿರಿ ಎಂದು ಸಲಹೆ ನೀಡಿದ್ದಾರೆ. 

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ವಿಶ್ವನಾಥ್‌ ಎಷ್ಟುಏಕವಚನದಲ್ಲಿ ಮಾತನಾಡಿದ್ದಾನೆ ಅಂತ ತೋರಿಸಲಾ?’ ಎಂದು ಪ್ರಶ್ನಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ಸಿದ್ದರಾಮಯ್ಯನವರೇ ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ ಎಂದಿದ್ದರು. 

ಮುಂದೆ ಸಾಗೋಣ ಬನ್ನಿ: ಸಿದ್ದರಾಮಯ್ಯಗೆ ಆಹ್ವಾನ ನೀಡಿದ ವಿಶ್ವನಾಥ್‌ ನಡೆ ಕುತೂಹಲ ...

ಇದಕ್ಕೆ ಸಿದ್ದರಾಮಯ್ಯ, ‘ನನ್ನದು ಹಳ್ಳಿ ಭಾಷೆ. ಹಾಗಾಗಿ ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶಪೂರ್ವಕವಾಗಿ ಏಕವಚನ ಬಳಸುವುದಿಲ್ಲ. ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ವಿಶ್ವನಾಥ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದಿದ್ದಾರೆ.