ಮೈಸೂರು, [ಮೇ.22]:  ಸಿದ್ದರಾಮಯ್ಯ ದುರಹಂಕಾರಿ ಎಂಬ ರೋಷನ್ ಬೇಗ್  ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರೋಷನ್ ಬೇಗ್ ಮಂತ್ರಿಗಿರಿಗೆ ಆಸೆ ಪಟ್ಟಿದ್ರು, ಜೊತೆಗೆ ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಅಧಿಕಾರದ ದಾಹದಿಂದ ರೋಷನ್ ಬೇಗ್ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು [ಬುಧವಾರ] ಮಾತನಾಡಿದ ಅವರು, ನನ್ನದು ಹಳ್ಳಿ ಭಾಷೆ ಮತ್ತು ನೇರ ನುಡಿ. ಸ್ವಾಭಿಮಾನಿಯಾದವರು ಮತ್ತು ಪ್ರಾಮಾಣಿಕರು ಮಾತ್ರ ನೇರ ನಿಷ್ಠುರ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ ಇದು ಕೆಲವು ಸೋಗಲಾಡಿ ವ್ಯಕ್ತಿತ್ವದವರಿಗೆ ಅಹಂಕಾರದಂತೆ ಕಾಣುತ್ತದೆ ಎಂದು ರೋಷನ್ ಬೇಗ್ ಗೆ ತಿವಿದರು. 

ರೋಷನ್ ಬೇಗ್ 'ಕೈ' ತೊರೆಯಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ..?

ನಾವು ಜನಪರ ಮತ್ತು ಬಡವರ ಪರವಾಗಿರುವುದರಿಂದ ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.  ಎಲ್ಲರಿಗೂ ಅಧಿಕಾರದ ದಾಹ ಇರುತ್ತದೆ. ಈ ಕುರಿತು ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

 ಇನ್ನು ಇದೇ ವೇಳೆ ಎಚ್. ವಿಶ್ವನಾಥ್  ಬಗ್ಗೆ ಪ್ರತಿಕ್ರಿಯಸಿದ ಸಿದ್ದು, ಅವರು ನಮ್ಮ ಪಕ್ಷದವರಲ್ಲ, ಅವರು ನೀಡುವ ಹೇಳಿಕೆ ಕುರಿತು ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಫ್ಲಾಪ್​ ಶೋ ಎಂದು ಸ್ವಪಕ್ಷದ ನಾಯಕರ ವಿರುದ್ಧ ಶಿವಾಜಿನಗರ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ಗುಡುಗಿದ್ದರು. ಇದು ಕಾಂಗ್ರೆಸ್ ಗೆ ಮುಜುಗರವಾಗಿದೆ.