Asianet Suvarna News Asianet Suvarna News

ಮಹಾಪುರುಷರ ಆದರ್ಶ ಪಾಲನೆಗೆ ಸಿದ್ದರಾಮಯ್ಯ ಕರೆ

ಬುದ್ಧ, ಬಸವಣ್ಣ, ಕನಕದಾಸ, ಗಾಂಧೀಜಿ, ಅಂಬೇಡ್ಕರ್‌ರ ಪುತ್ಥಳಿ ಪೂಜಿಸುವುದರಿಂದಲ್ಲ ಅಂತಹ ಮಹನೀಯರು ಹೇಳಿದ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಆ ನಿಟ್ಟಿನಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Siddaramaiah calls for following the example of great men at davanagere rav
Author
First Published Dec 31, 2022, 7:14 AM IST

ದಾವಣಗೆರೆ (ಡಿ.31) : ಬುದ್ಧ, ಬಸವಣ್ಣ, ಕನಕದಾಸ, ಗಾಂಧೀಜಿ, ಅಂಬೇಡ್ಕರ್‌ರ ಪುತ್ಥಳಿ ಪೂಜಿಸುವುದರಿಂದಲ್ಲ ಅಂತಹ ಮಹನೀಯರು ಹೇಳಿದ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಆ ನಿಟ್ಟಿನಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ವೀರ ಮದಕರಿ ನಾಯಕ ವೃತ್ತದಲ್ಲಿ ಶುಕ್ರವಾರ ಶ್ರೀ ಎಲ್‌ಬಿಕೆ ಕಲ್ಯಾಣ ಟ್ರಸ್ಟ್‌ ಹಮ್ಮಿಕೊಂಡಿದ್ದ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್‌, ಕನಕರು ತೋರಿದ ಹಾದಿಯಲ್ಲಿ ಸಾಗಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಎಸ್ಸಿ-ಎಸ್ಟಿ ಮೀಸಲು ಕಣ್ಣೊರೆಸೋ ತಂತ್ರವೇ?: ಸಿದ್ದರಾಮಯ್ಯ

ಧರ್ಮಗಳು ಜನರ ಒಳತಿಗಾಗಿ ಇವೆಯೇ ಹೊರತು, ಧರ್ಮಕ್ಕಾಗಿ ಜನರು ಇಲ್ಲ. ದೇಶದಲ್ಲಿ ಇಂದು ಧರ್ಮ- ಧರ್ಮಗಳ ಮಧ್ಯೆ ಗೋಡೆ ಕಟ್ಟಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಂತಹ ಗೋಡೆಗಳನ್ನು ತೊಡೆದು ಹಾಕುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹಿಂದು, ಕ್ರೈಸ್ತ, ಮುಸ್ಲಿಂ ಸೇರಿದಂತೆ ಅನೇಕ ಧರ್ಮಗಳು ನಮ್ಮ ದೇಶದಲ್ಲಿವೆ. ಧರ್ಮಗಳು ಉತ್ತಮ ಮನುಷ್ಯನನ್ನಾಗಿ ಮಾಡುವುದಕ್ಕಿವೆ. ಮನುಷ್ಯನಿಗಾಗಿ ಧರ್ಮವಿದೆಯೇ ಹೊರತು, ಧರ್ಮಕ್ಕಾಗಿ ಮನುಷ್ಯನಲ್ಲ ಎಂದು ಹೇಳಿದರು.

ಹೆತ್ತವರು ಹಣ ಖರ್ಚು ಮಾಡಿ ಮದುವೆ ಮಾಡುವುದರಿಂದ ಮತ್ತಷ್ಟುಬಡತನ ಹೆಚ್ಚುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟುಕಾಲು ಚಾಚಬೇಕು. ಕಡಿಮೆ ಖರ್ಚಿನಲ್ಲಿ ವಿವಾಹವಾಗಬೇಕು. ಸಾಮೂಹಿಕ ಮದುವೆಯಾದವರು ತಮಗೆ ಹುಟ್ಟುವ ಮಕ್ಕಳಿಗೂ ಸರಳವಾಗಿ ಅಥವಾ ಸಾಮೂಹಿಕ ವಿವಾಹವಾಗುವಂತೆ ಹೇಳುತ್ತಿರಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಇದೊಂದು ಮಾದರಿಯಾದ ಕಾರ್ಯಕ್ರಮವಾಗಿದೆ. ಇಂತಹ ಸಮಾರಂಭಗಳು ಕೇವಲ ಬಿ. ವೀರಣ್ಣನಂತಹ ಒಬ್ಬಿಬ್ಬರು ಮಾಡಿದರಷ್ಟೇ ಸಾಲದು, ಸಮಾಜದ ಎಲ್ಲರೂ ಪ್ರೋತ್ಸಾಹಿಸಬೇಕು. ಸಾಮೂಹಿಕ ವಿವಾಹದ ಮೂಲಕ ಬಡ, ಕಡು ಬಡ ಪಾಲಕರು, ಅದರಲ್ಲೂ ಹೆಣ್ಣು ಹೆತ್ತವರ ಆರ್ಥಿಕ ಸಮಸ್ಯೆಯನ್ನು ನೀಗಿಸುವ ಕೆಲಸವನ್ನು ಬಿ. ವೀರಣ್ಣ, ಲಕ್ಷ್ಮೀದೇವಿ ವೀರಣ್ಣ ಹಾಗೂ ವಿನಾಯಕ ಕುಟುಂಬ ಮಾಡುತ್ತಿದೆ. ನವ ಜೋಡಿಗಳು ಪರಸ್ಪರರನ್ನು ಅರಿತು, ಸಾಮರಸ್ಯದ ಬಾಳು ಬಾಳಬೇಕು ಎಂದರು.

ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ 13 ಜೋಡಿಗಳು ಹೊಸ ಜೀವನಕ್ಕೆ ಅಡಿ ಇಟ್ಟವು. ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿ.ವೀರಣ್ಣ, ಲಕ್ಷ್ಮಿದೇವಿ ದಂಪತಿ ಬೆಳ್ಳಿ ಖಡ್ಗ ನೀಡುವ ಮೂಲಕ ಶುಭಾರೈಸಿದರು.

ವಿಪ ಸದಸ್ಯ ಕೆ.ಅಬ್ದುಲ್‌ ಜಜಬ್ಬಾರ್‌, ಟ್ರಸ್ಟ್‌ ಅಧ್ಯಕ್ಷ, ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಲಕ್ಷ್ಮೀದೇವಿ ವೀರಣ್ಣ, ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್‌, ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ಜಿಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಸವಿತಾಬಾಯಿ ಮಲ್ಲೇಶ ನಾಯ್ಕ, ಹಿರಿಯ ವಕೀಲ ಎನ್‌.ಎಂ. ಆಂಜನೇಯ ಗುರೂಜಿ, ಹೊದಿಗೆರೆ ರಮೇಶ, ವಕೀಲ ನಾಗೇಂದ್ರಪ್ಪ ಇತರರು ಇದ್ದರು.

ದಾವಣಗೆರೆ: ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿಮಾತ್ರ ಒಂದೇ ಇರುತ್ತದೆ. ಎರಡು ಕಿವಿ ಇದ್ದರೂ ಒಂದೇ ಶಬ್ದ ಕೇಳುತ್ತದೆ. ಅದೇ ರೀತಿ ಸತಿ ಪತಿಗಳು ದೇಹ ಎರಡಾಗಿದ್ದರೂ ಒಂದೇ ಆಗಿ, ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಇದರಿಂದ ಬದುಕು ಸ್ವರ್ಗವಾಗುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ವೀರ ಮದಕರಿ ನಾಯಕ ವೃತ್ತದಲ್ಲಿ ಶ್ರೀ ಎಲ್‌ಬಿಕೆ ಟ್ರಸ್ಟ್‌ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸತಿ-ಪತಿ ಮಧ್ಯೆ ಹೊಂದಾಣಿಕೆ ಇಲ್ಲದಿದ್ದರೆ ಬದುಕು ನರಕವಾಗುತ್ತದೆ. ಆದ್ದರಿಂದ ಇಬ್ಬರೂ ಒಂದೇ ಆಲೋಚನೆ ಮಾಡಿದರಷ್ಟೇ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.

Belagavi Winter Session: ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದು ಆಕ್ರೋಶ

ಸತಿ ಪತಿ ಇಬ್ಬರೂ ಪರಸ್ಪರ ಅರಿತು, ಹೊಂದಾಣಿಕೆಯಿಂದ ಬಾಳಬೇಕು. ಇದರಿಂದ ಜೀವನದ ಬಂಡಿ ಸುಲಭವಾಗಿ ಸಾಗುತ್ತದೆ. ಇಲ್ಲದಿದ್ದರೆ ಜೀವನ ನಡೆಸಲಾಗುವುದಿಲ್ಲ. ಗಂಡ-ಹೆಂಡತಿಯೆಂದರೆ ಎರಡು ಚಕ್ರವಿದ್ದಂತೆ. ಇಬ್ಬರೂ ಸರಿಯಾಗಿ ನಡೆದು, ತಮಗೆ ಜನಿಸುವ ಮಕ್ಕಳನ್ನು ಸತ್ೊ್ರಜೆಗಳಾಗಿ ಬೆಳೆಸಿ, ದೇಶದ ಆಸ್ತಿಯಾಗಿ ಬೆಳೆಸಬೇಕು.

ಡಾ.ಶಾಮನೂರು ಶಿವಶಂಕರಪ್ಪ, ಶಾಸಕರು, ದಾವಣಗೆರೆ ದಕ್ಷಿಣ.

ಬುದ್ಧ, ಬಸವಣ್ಣ, ಅಂಬೇಡ್ಕರ್‌ ವೈಚಾರಿಕತೆಯು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿದೆ. ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದರು. ಮುಂದಿನ ದಿನಗಳಲ್ಲಿ ಇಂತಹ ಸಮಾನತೆಯ ಹರಿಕಾರ, ವೈಚಾರಿಕತೆಯ ಜ್ಞಾನಿ ನಾಡಿನ ಮುಖ್ಯಮಂತ್ರಿಯಾದರೆ ರಾಜ್ಯವು ಕಲ್ಯಾಣವಾಗುತ್ತದೆ. ಇಂತಹ ಮಖ್ಯಮಂತ್ರಿಗಳು ನಮಗೆ ಬೇಕಾಗಿದ್ದಾರೆ. ಸಿದ್ದರಾಮಯ್ಯಗೆ ಶ್ರೀ ಬಸವೇಶ್ವರರು, ಶ್ರೀ ಮುರುಗೇಶ್ವರರು ಆಶೀರ್ವಾದ ಮಾಡಲಿ.

ಶ್ರೀ ಬಸವಪ್ರಭು ಸ್ವಾಮೀಜಿ ಮುರುಘಾಮಠ ಚಿತ್ರದುರ್ಗ

Follow Us:
Download App:
  • android
  • ios