Karnataka Budget 2023: ವಿಜಯಪುರ ಜಿಲ್ಲೆಗೆ ಘೋಷಣೆಗಳ ಗಾಳಿಗೋಪುರ..!
ಆಲಮಟ್ಟಿ ಅಣೆಕಟ್ಟೆ ಎತ್ತರ, ಹೊರ್ತಿ ನೀರಾವರಿ ಸೇರಿ ಬಿಜೆಪಿ ಪ್ರಸ್ತಾಪಿತ ಯೋಜನೆಗೆ ಎಳ್ಳುನೀರು, ಹಳೆಯ ಬಜೆಟ್‌ನಲ್ಲಿನ ಸಾಲುಗಳನ್ನೇ ಮತ್ತೊಮ್ಮೆ ಓದಿದಂತಿರುವ ಕಾಂಗ್ರೆಸ್ ಸರ್ಕಾರದ ಬಜೆಟ್: ಟೀಕೆ
ರುದ್ರಪ್ಪ ಆಸಂಗಿ
ವಿಜಯಪುರ(ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜಿಲ್ಲೆಗೆ ಯಾವುದೇ ಹೊಸ ಕೊಡುಗೆ ನೀಡದೇ ಇರುವುದರಿಂದ ಜಿಲ್ಲೆಯ ಜನರ ಆಶೋತ್ತರಗಳಿಗೆ ತಣ್ಣೀರು ಎರಚಿದಂತಾಗಿದೆ. ಈ ಕಾರಣಕ್ಕಾಗಿ ಜಿಲ್ಲೆಯ ಜನರ ಪಾಲಿಗೆ ಬರೀ ಬುರಡೆ ಬಜೆಟ್ ಆಗಿ ಪರಿಣಮಿಸಿದೆ.
ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಜಿಲ್ಲೆಗೆ ವರದಾನ ಆಗಬಹುದು ಎಂದು ಜಿಲ್ಲೆಯ ಜನರು ಸಾಕಷ್ಟುಆಶಾಭಾವನೆ ಹೊಂದಿದ್ದರು. ಆದರೆ, ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂಥ ಕೊಡುಗೆ ನೀಡದೇ ಬಜೆಟ್ ಜಿಲ್ಲೆಯ ಜನರಲ್ಲಿ ಭಾರಿ ನಿರಾಸೆ ಮೂಡಿಸಿದೆ. ಒಂದೆರಡು ಸಣ್ಣ, ಪುಟ್ಟಘೋಷಣೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದನ್ನು ಬಿಟ್ಟರೆ, ವಿಶೇಷವಾಗಿ ಯಾವುದೇ ಯೋಜನೆ ಇಲ್ಲದೇ, ಸಿದ್ದರಾಮಯ್ಯ ಸರ್ಕಾರದ ಬಜೆಟ್ ನೀಡಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ
ಕೃಷ್ಣಾ ಮೇಲ್ದಂಡೆ ಯೋಜನೆ ಹೆಚ್ಚಿನ ಅನುದಾನ ಒದಗಿಸಿ, ಮೂರನೇ ಹಂತದ ನೀರಾವರಿ ಕಾಮಗಾರಿಗಳಿಗೆ ವೇಗ ನೀಡಬಹುದು ಎಂದು ಜಿಲ್ಲೆಯ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೃಷ್ಣಾ ನ್ಯಾಯಾಧಿಕರಣ-2 ತೀರ್ಪಿನ ಅನ್ವಯ ಲಭ್ಯವಾದ 130 ಟಿಎಂಸಿ ನೀರು ಸದ್ಬಳಕೆಗೆ ಆದ್ಯತೆ ನೀಡುವ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಆದರೆ, ಅದಕ್ಕೆ ಎಷ್ಟುಅನುದಾನ ತಗೆದಿಡಲಾಗಿದೆ ಎಂಬ ವಿವರವಿಲ್ಲ. ಹೀಗಾಗಿ, ಇದು ಬರೀ ಘೋಷಣೆಯಾಗಿ ಮಾತ್ರವೇ ಉಳಿದರೂ ಅಚ್ಚರಿ ಪಡಬೇಕಿಲ್ಲ. ಈ ಬಜೆಟ್‌ನಲ್ಲಿ ಆಲಮಟ್ಟಿಅಣೆಕಟ್ಟೆಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವ ಬಹುದಿನಗಳ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಯುಕೆಪಿಗೆ . 5000 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ಈ ಬಜೆಟ್‌ನಲ್ಲಿ ಯುಕೆಪಿಗೆ ಅನುದಾನ ಕಾಯ್ದಿಟ್ಟಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ವಿಜಯಪುರ ವಿಮಾನನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿ ವಿಮಾನನಿಲ್ದಾಣದ ಕಾರ್ಯಾಚರಣೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಕಳೆದ ಬಿಜೆಪಿ ಸರ್ಕಾರ ಬಹುತೇಕ ವಿಮಾನನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಈಗ ಸಿವಿಲ್ ಕಾಮಗಾರಿ ಬಾರಿ ಉಳಿದಿದೆ. ಅದನ್ನು ಪೂರ್ಣಗೊಳಿಸಿ ವಿಮಾನನಿಲ್ದಾಣದ ಕಾರ್ಯಾಚರಣೆ ಆರಂಭಿಸುವುದು ಕಷ್ಟದ ಕೆಲಸವೇನಲ್ಲ.
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಲ್ಲದೇ, ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕೈಗಾರಿಕೆ ವಸಾಹತು ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಸ್ವಲ್ಪ ಆಶಾದಾಯಕವಾಗಿದೆ. ಆದರೆ, ಈ ಉದ್ದೇಶಕ್ಕೆ ಎಷ್ಟುಹಣ ಕಾಯ್ದಿಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ವಿಜಯಪುರದ ಆನಂದಮಹಲ್ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಇದು ಹಿಂದಿನ ಬಿಜೆಪಿ ಸರ್ಕಾರದಲ್ಲಿಯೇ ಆನಂದಮಹಲ್ ಕಟ್ಟಡವನ್ನು ಮಾಹಿತಿ ಕೇಂದ್ರ ಸ್ಥಾಪಿಸಲು ಘೋಷಿಸಿತ್ತು. ಈ ಘೋಷಣೆಯಂತೆ ಯಾವುದೇ ಕಾಮಗಾರಿ ನಡೆದಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಘೋಷಣೆ ಮಾಡಿದೆ. ಇದರಲ್ಲಿ ಹೊಸತೇನೂ ಇಲ್ಲ.
ವಿಜಯಪುರದ ಗೋಳಗುಮ್ಮಟ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ ಶ್ರೀಮಂತಿಕೆಯನ್ನು ಪ್ರದರ್ಶಿಸಲು 3ಡಿ, ಪ್ರೊಜೆಕ್ಷನ್, ಮಲ್ಟಿಮಿಡಿಯಾ, ಸೌಂಡ್ ಮತ್ತು ಲೈಟ್‌ಶೋ ಯೋಜನೆ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು ಕೂಡಾ ಹಳೆಯ ಯೋಜನೆಯೇ. ಈ ಹಿಂದೆ ಎಷ್ಟೋ ಬಜೆಟ್‌ಗಳಲ್ಲಿ ಈ ರೀತಿ ಘೋಷಣೆ ಆಗಿದೆ. ಕೆಲ ದಿನಗಳವರೆಗೆ ಈ ಯೋಜನೆಯ ಅನುಷ್ಠಾನವೂ ಆಗಿದ್ದಿದೆ. ಈಗ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಕಾಂಗ್ರೆಸ್ ಸರ್ಕಾರ ಹಳೆಯ ಬಜೆಟ್‌ನಲ್ಲಿನ ಸಾಲುಗಳನ್ನೇ ಮತ್ತೊಮ್ಮೆ ಓದಿದಂತಿದೆ.
ಜಿಲ್ಲೆಯ ಇಂಡಿ ಭಾಗದ ರೈತರ ಹೊಲಗಳಿಗೆ ನೀರುಣಿಸುವ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಮಹತ್ವಕಾಂಕ್ಷಿ ಯೋಜನೆಯ ಪ್ರಸ್ತಾಪವಿಲ್ಲ. ವಿಜಯಪುರ ಗೋಳಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಪೂರಕ ಯೋಜನೆಯ ಪ್ರಸ್ತಾಪವೂ ಇಲ್ಲ.
ಗೋಳಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿತ್ತು. ಅದು ಕೂಡಾ ಈ ಬಜೆಟ್‌ನಲ್ಲಿ ಆಗಿಲ್ಲ. ಹಿಂದಿನ ಬಿಜೆಪಿ ಸರ್ಕಾರ ವಿಜಯಪುರ ನಗರಕ್ಕೆ ಜವಳಿಪಾರ್ಕ್ ಕೂಡಾ ಘೋಷಣೆ ಮಾಡಿತ್ತು. ಈ ಬಗ್ಗೆಯೂ ಕಾಂಗ್ರೆಸ್ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಇದು ದಾಖಲೆ ಸ್ಥಾಪಿಸಿಕೊಳ್ಳಲು ಮಂಡಿಸಿದ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಟೀಕೆ
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಈ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಬಗ್ಗೆ ಎಲ್ಲಿಯೂ ಸುಳಿವಿಲ್ಲ. ವಿಜಯಪುರ ನಗರ ಸೌಂದರ್ಯೀಕರಣಕ್ಕೆ ಒತ್ತುನೀಡುವ ನಿಟ್ಟಿನಲ್ಲಿಯೂ ಮಾಸ್ಟರ್‌ಪ್ಲಾನ್ ಯೋಜನೆಗೂ ಅನುದಾನವಿಲ್ಲ. ವಿಜಯಪುರ ಜಿಲ್ಲೆಯ ಸಾರವಾಡ ಬಳಿ ಪ್ರತಿ ವರ್ಷ ಮಳೆಗಾಲದಲ್ಲಿ ಬೇಕಾಬಿಟ್ಟಿರೈತರ ಜಮೀನುಗಳಿಗೆ ನುಗ್ಗಿ ಭಾರಿ ಹಾನಿ ಮಾಡುವ ಡೋಣಿ ನದಿ ಹೂಳೆತ್ತುವ ಪ್ರಸ್ತಾಪ ಕೂಡಾ ಇಲ್ಲ. ನದಿದಂಡೆಯ ರೈತರ ಡೋಣಿ ನದಿ ಹೂಳೆತ್ತುವ ಕನಸು ಮತ್ತೆ ಹಗಲುಗನಸಾಗಿ ಉಳಿದಿದೆ.
ಕಳೆದ ಬಜೆಟ್‌ನಲ್ಲಿ ತೊರವಿಯಲ್ಲಿ ದ್ರಾಕ್ಷಿ ಬೆಳೆಗಾರರ ದ್ರಾಕ್ಷಿ ಕೆಡದಂತೆ ಇಡಲು ಹೈಟೆಕ್ ಕೋಲ್ಡ್‌ಸ್ಟೊರೇಜ್‌ಗೆ ಬಿಜೆಪಿ ಸರ್ಕಾರದಲ್ಲಿ .135 ಕೋಟಿ ಅನುದಾನ ಮಂಜೂರಾಗಿತ್ತು. ದ್ರಾಕ್ಷಾರಸ ಹಾಗೂ ದ್ರಾಕ್ಷಿ ಅಭಿವೃದ್ಧಿ ಮಂಡಳಿ ರಚಿಸಿ ಅದಕ್ಕೆ .100 ಕೋಟಿ ಅನುದಾನ ಒದಗಿಸುವ ಭರವಸೆಯನ್ನು ಹಿಂದಿನ ಸರ್ಕಾರ ನೀಡಿತ್ತು. ಆದರೆ, ಸಿದ್ದರಾಮಯ್ಯ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಬಜೆಟ್‌ನಲ್ಲಿ ದ್ರಾಕ್ಷಿ ಉತ್ಪನ್ನಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಇದು ದ್ರಾಕ್ಷಿ ಬೆಳೆಗಾರರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ.