Asianet Suvarna News Asianet Suvarna News

ಅಣಕಿಸಿದ್ದೆ ನಿಜವಾಯ್ತು : ಕೃಷಿಕ ದಂಪತಿಯ ಪುತ್ರನೀಗ KAS ಅಧಿಕಾರಿ

ಕೃಷಿ ಕಾಯಕಯೋಗಿ ದಂಪತಿಯ ಪುತ್ರನೀಗ ಕೆಎಎಸ್ ನಲ್ಲಿ ಸಾಧನೆ ಮಾಡಿದ್ದು, ಕಂದಾಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಂದು ಶಾಲೆಯಲ್ಲಿ ಅಣಕಿಸಿದ್ದೇ ಇಂದು ಅವರ ಜೀವನದಲ್ಲಿ ನಿಜವಾಗಿದೆ.

Siddapura Farmer Son Success in KAS Exam
Author
Bengaluru, First Published Jan 2, 2020, 2:34 PM IST

ಸಿದ್ಧಾಪುರ [ಜ.02]: ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಯಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್. ಇವರು ಮೊನ್ನೆ ಬಿಡುಗಡೆಯಾದ ಕೆಎಎಸ್ ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾಗಿದ್ದಾರೆ.

ಬಾಲಕರಾಗಿದ್ದಾಗ ತಂದೆ ರೇವಣ್ಣಪ್ಪ ಡಿ.ಸಿ. ಯವರ ಹೆಸರಿನೊಂದಿಗೆ ಸ್ನೇಹಿತರು ಆಗಾಗ ತಮಾಷೆ ಮಾಡುತ್ತಿದ್ದಾಗ ‘ಯಾಕ್ರೀ ರೈತರ ಮಕ್ಕಳು ಡಿ.ಸಿ. ಆಗಬಾರದಾ?’ ಎಂದು ಪ್ರಶ್ನಿಸುತ್ತಿದ್ದರಂತೆ. ಅಲ್ಲದೇ ಇವರು ಪದವಿ ವ್ಯಾಸಂಗದಲ್ಲಿರುವಾಗ ತಂದೆಗೆ ಆದ ಚಿಕ್ಕ ನೋವಿನ ಸಂದರ್ಭದಲ್ಲಿ ‘ಮಗನೇ ನೀನೆಂದೂ ಸೋಲದ ದಾರಿ ತುಳಿಯಬಾರದು’ ಆ ಹುದ್ದೆ ಪಡೆಯಲು ಪ್ರಯತ್ನಿಸಬೇಕು’ ಎಂದು ಹೇಳಿದ ಮಾತು ದೇವರಾಜ್ ಅವರನ್ನು ಕಾಡುತ್ತಿತ್ತು.

ದೇವರಾಜ್ ಧಾರವಾಡದಲ್ಲಿ ಬಿಎಸ್ಸಿ ಅಗ್ರಿ ಪದವಿ ಗಳಿಸಿ 2015 ರಲ್ಲಿ ಅಲ್ಲಿಯೇ ಕವಿವಿಯಿಂದ ಎಂಎಸ್ಸಿ ಪದವಿಯನ್ನುಉನ್ನತ ಸ್ಥಾನದೊಂದಿಗೆ ತೇರ್ಗಡೆ ಹೊಂದಿದರು. 2017 ರಲ್ಲಿ ಅಬಕಾರಿ ನಿರೀಕ್ಷಕ ಹುದ್ದೆಯ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕದೊಂದಿಗೆ ಆಯ್ಕೆಯಾಗಿದ್ದರೂ ಹುದ್ದೆ ಸ್ವೀಕರಿಸಲು ನಿರಾಕರಿಸಿದರು. 2018 ರಲ್ಲಿ ಅಪೂರ್ವ ಪರೀಕ್ಷೆ ಬರೆದು ಪಾಸಾಗಿ ಮುಖ್ಯ ಪರೀಕ್ಷೆಯಲ್ಲಿ ಕೇವಲ 21 ಅಂಕಗಳಿಂದ ವಂಚಿತರಾಗಿದ್ದರೂ ಛಲ ಬಿಟ್ಟಿಲ್ಲ. 2017 ರಲ್ಲಿ ತಮಗಿಷ್ಟವಾದ ‘ಅಗ್ರಿಕಲ್ಚರ್’ ಇಲಾಖೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಸದ್ಯಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ‘ಸಹಾಯಕ ಕೃಷಿ ನಿರ್ದೇಶಕ’ರಾಗಿ, ರೈತರ ಸ್ನೇಹಿಯಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೇ 2017ರಲ್ಲಿ ಬರೆದ ಕೆಎಎಸ್ ಪರೀಕ್ಷೆಯಲ್ಲಿ ಗ್ರಾಮೀಣಾಭಿವೃದ್ಧಿ ವಿಷಯವನ್ನು ಆಯ್ಕೆ ಮಾಡಿಕೊಂಡು ಅತ್ಯುನ್ನತ ಅಂಕ ಗಳಿಸಿ ಮೊದಲ ಸುತ್ತಿಯಲ್ಲಿಯೇ ‘ಉಪ-ವಿಭಾಗಾಧಿಕಾರಿ’ ಹುದ್ದೆಗೆ ಆಯ್ಕೆಯಾಗಿ ತಂದೆಯ ಕನಸನ್ನು ಬಹುತೇಕ ನನಸು ಮಾಡಿದ್ದಾರೆ. ‘ಪೃಥ್ವಿ’ ಚಿತ್ರದ ನಾಯಕನಂತೆ ಜನಮೆಚ್ಚುವ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಇನ್ನೂ ಹಸಿರಾಗಿಯೇ ಉಳಿಸಿಕೊಂಡು ನಿರಂತರ ಅಧ್ಯಯನಶೀಲರಾಗಿದ್ದಾರೆ. ಅಪ್ಪಾಜಿ, ಅವ್ವ, ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಹಿತೈಷಿಗಳ ಬೆಂಬಲ ಆಶೀರ್ವಾದವೇ ಸ್ಫೂರ್ತಿ ಎನ್ನುವ ದೇವರಾಜ್ ಹಿತೈಷಿಗಳಿಗೆ ಕೃತಜ್ಞತೆ ಹೇಳಬಯಸುತ್ತಾರೆ.

Follow Us:
Download App:
  • android
  • ios