ಉಡುಪಿ(ಆ.08): ನಗರಠಾಣೆಯ ಪೊಲೀಸ್‌ ಎಸೈ ಮತ್ತು ಇನ್ನಿಬ್ಬರು ಬಾವಿಗೆ ಇಳಿದು, ಆತ್ಮಹತೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ಕುಕ್ಕಿಕಟ್ಟೆಯ ನಿವಾಸಿ ಶಾರದಾ (68) ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಮಾರ್ಪಳ್ಳಿ ಎಂಬಲ್ಲಿರುವ ಬಾವಿಗೆ ಹಾರಿದ್ದರು. ಈ ಶಬ್ದ ಕೇಳಿದ ಸ್ಥಳೀಯ ಆಟೋ ಚಾಲಕ ರಾಜೇಶ್‌ ನಾಯಕ್‌ ಹೋಗಿ ನೋಡಿದಾಗ ಮಹಿಳೆ, ಬಾವಿಗೆ ಅಳವಡಿಸಿದ್ದ ಪಂಪಿನ ಪೈಪು ಹಿಡಿದು ನೇತಾಡುತ್ತಿದ್ದರು. ರಾಜೇಶ್‌ ಅವರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಬಾವಿಗಿಳಿದರಾದರೂ ವೃದ್ಧೆಯನ್ನು ಮೇಲಕ್ಕೆ ತರಲಾಗಲಿಲ್ಲ.

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣ ಬಂದ್‌

ಮಾಹಿತಿ ಪಡೆದ ಎಸೈ ಸದಾಶಿವ ಗವರೋಜಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿಯೂ ಬಂದರು. ಎಸೈ ಅವರು ಕೂಡಲೇ ಸಮವಸ್ತ್ರದಲ್ಲಿಯೇ ಬಾವಿಗೆ ಇಳಿದರು. ಅವರೊಂದಿಗೆ ಅಗ್ನಿಶಾಮಕ ದಳದ ವಿನಾಯಕ ಅವರೂ ಬಾವಿಗಿಳಿದರು. ನಂತರ ಮೂವರೂ ಸೇರಿ ಹಗ್ಗದ ಸಹಾಯದಿಂದ ವೃದ್ಧೆಯನ್ನು ಬಾವಿಯಿಂದ ಹೊರಗೆ ತಂದರು. ಈ ಮೂರು ಮಂದಿಯ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.