ವಿಜಯಪುರ(ಸೆ.06): ದೇಶದ ಪ್ರಧಾನಿ ನರೇಂದ್ರ ಮೋದಿ ಗ್ರೇಟ್ ಶೋ ಮ್ಯಾನ್ ಆಗಿದ್ದು, ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ಮಾಜಿ‌ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.

ತಿಕೋಟಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ರಾಜ್ಯದ ಪ್ರವಾಹ, ದೇಶದ ಜಿಡಿಪಿ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಅವರೊಬ್ಬ ಗ್ರೇಟ್ ಶೋ ಮ್ಯಾನ್ ಆಗಿದ್ದಾರೆ. ಅವರು ಭಾರತದ ಪ್ರಧಾನಿಯಲ್ಲ. ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಜನರ ದುಡ್ಡು ಖರ್ಚು ಮಾಡಿಸ್ತಿದ್ದಾರೆ:

ಅನರ್ಹ ಶಾಸಕರಿಂದಾಗಿ‌ 16 ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ನಡೆಯುವ ಚುನಾವಣೆಗೆ ಖರ್ಚು ಆಗುತ್ತಿರುವ ದುಡ್ಡು ಯಾರದ್ದು ಎಂದು ಪ್ರಶ್ನಿಸಿದ ಅವರು, ಜನರ ದುಡ್ಡು ಖರ್ಚು‌ ಮಾಡಿಸುತ್ತಿದ್ದಾರೆ. ಇವರನ್ನು ಕ್ಷೇತ್ರದ ಜನತೆ ಕ್ಷಮಿಸುವುದಿಲ್ಲ ಎಂದಿದ್ದಾರೆ.

ಪ್ರವಾಹದಿಂದಾಗಿ‌ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುದಾನ ಬಿಡುಗಡೆ‌ ಮಾಡಿಲ್ಲ. 40 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಆದರೆ ಚಿಕ್ಕಾಸು ಬಿಡುಗಡೆ ಮಾಡಿಲ್ಲ ಎಂದರು.