ರಸ್ತೆ ಗುಂಡಿ ತೋರಿಸಿ, ಬಹುಮಾನ ಗೆಲ್ಲಿ: ಹೀಗೊಂದು ವಿಶಿಷ್ಟ ಸ್ಪರ್ಧೆ..!
ಆ.24ರಿಂದ ಆ.29ರ ಸಂಜೆ 5ರ ವರೆಗೆ ಮಂಗಳೂರು ಸ್ಮಾರ್ಟ್ ಸಿಟಿ ಪ್ರದೇಶದ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಗುಂಡಿಯನ್ನು ಸಾರ್ವಜನಿಕರು ಗುರುತಿಸಿ ನಿಗದಿತ ವಾಟ್ಸಪ್ ನಂಬರ್‌ಗೆ ಕಳುಹಿಸಬೇಕು.
ಮಂಗಳೂರು(ಆ.25): ಸ್ಮಾರ್ಟ್ ಸಿಟಿ ಮಂಗಳೂರಿನ ರಸ್ತೆಗಳಲ್ಲಿರುವ ದೊಡ್ಡ ಗುಂಡಿಯ ಫೋಟೊ ಕಳುಹಿಸಿ, ಬಹುಮಾನ ಗೆಲ್ಲಿ.. ಯಾರು ದೊಡ್ಡ ಗುಂಡಿ ತೋರಿಸಿ ಕೊಡುತ್ತಾರೋ ಅವರಿಗೆ ಪ್ರಥಮ ಬಹುಮಾನ..!
ಹೀಗೊಂದು ವಿಶಿಷ್ಟ ಸ್ಪರ್ಧೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಏರ್ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸ್ಪರ್ಧೆಗೆ ‘ಸ್ಮಾರ್ಟ್ ಸಿಟಿ ಮಾದರಿ ರಸ್ತೆ; ಗುಂಡಿಗಳ ಸ್ಪರ್ಧೆ-2022’ ಎಂದು ಹೆಸರಿಡಲಾಗಿದೆ. ಆ.24ರಿಂದ ಆ.29ರ ಸಂಜೆ 5ರ ವರೆಗೆ ಮಂಗಳೂರು ಸ್ಮಾರ್ಟ್ ಸಿಟಿ ಪ್ರದೇಶದ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಗುಂಡಿಯನ್ನು ಸಾರ್ವಜನಿಕರು ಗುರುತಿಸಿ ನಿಗದಿತ ವಾಟ್ಸಪ್ ನಂಬರ್‌ಗೆ ಕಳುಹಿಸಬೇಕು. ಅತಿ ದೊಡ್ಡ ಗುಂಡಿ ತೋರಿಸುವವರಿಗೆ ಪ್ರಥಮ 5 ಸಾವಿರ ರು. ಬಹುಮಾನ, ದ್ವಿತೀಯ 3 ಸಾವಿರ ರು. ಹಾಗೂ ತೃತೀಯ 2 ಸಾವಿರ ರು.ಗಳನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.
Bengaluru potholes : ಮಳೆ, ಕಾಮಗಾರಿಗೆ ಗುಂಡಿ ಬೀಳುತ್ತಿವೆ ರಸ್ತೆಗಳು!
ಹೀಗೆ ಕಳುಹಿಸಿ:
ಗುಂಡಿ ಚಿತ್ರ ಕಳುಹಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊಬೈಲ್- 9731485875 ಸಂಖ್ಯೆಗೆ ವಾಟ್ಸಪ್ ಮೂಲಕ ಗುರುತಿಸಿದ ಗುಂಡಿಗಳ ಚಿಕ್ಕ ವಿಡಿಯೊಗಳು, ಪೋಟೊ ಹಾಗೂ ಜಿಪಿಎಸ್ ಲೊಕೇಶನ್ ಕಳುಹಿಸಕೊಡಬೇಕು. ಮೂವರು ತೀರ್ಪುಗಾರರು ಈ ಚಿತ್ರಗಳನ್ನು ಪರಿಗಣಿಸಿ ಅರ್ಹರನ್ನು ಆಯ್ಕೆ ಮಾಡಲಿದ್ದಾರೆ ಎಂದರು. ಕಾರ್ಯಕ್ರಮದ ಸಂಚಾಲಕ ದೀಕ್ಷಿತ್ ಅತ್ತಾವರ, ಪ್ರಮುಖರಾದ ಮೀನಾ ಟೆಲ್ಲಿಸ್, ರಮಾನಂದ ಪೂಜಾರಿ ಹಾಗೂ ಮಾರ್ಸೆಲ್ ಮೊಂತೆರೊ ಇದ್ದರು.
ಬೃಹತ್ ಗುಂಡಿಗಳಿಂದಾಗಿ ಅನೇಕ ಜೀವಗಳು ಬಲಿಯಾಗಿವೆ. ಅನೇಕರು ಅಪಘಾತಕ್ಕೆ ಒಳಗಾಗಿದ್ದಾರೆ. ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರದ ಗಮನ ಸೆಳೆಯುವ ಭಾಗವಾಗಿ ಈ ಸ್ಪರ್ಧೆಯ ಮೂಲಕ ಜನಾಂದೋಲನ ನಡೆಸಲು ನಿರ್ಧರಿಸಲಾಗಿದೆ ಅಂತ ಮಾಜಿ ಎಂಎಲ್ಸಿ ಐವನ್ ಡಿಸೋಜ ತಿಳಿಸಿದ್ದಾರೆ.