ಹರಪನಹಳ್ಳಿ: ಕೋವಿಡ್ ಸಂಕಷ್ಟದಲ್ಲಿ ವೈದ್ಯರ ಕೊರತೆ, ಆತಂಕದಲ್ಲಿ ಜನತೆ
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ದಿನೇ ದಿನೇ ಕೊರೋನಾ ಹೆಚ್ಚಳ| ಕೋವಿಡ್ ಹಾಸಿಗೆ 20ರಿಂದ 50ಕ್ಕೆ ಹೆಚ್ಚಿಸುವಂತೆ ಡಿಸಿಗೆ ಪ್ರಸ್ತಾವನೆ| ತೀವ್ರ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು| ಸಕ್ಕರೆರೋಗ ಹಾಗೂ ಬಿ.ಪಿ. ಕಾಯಿಲೆಗೆ ಸಂಬಂಧಪಟ್ಟ ಕೆಲವೊಂದು ಔಷಧಿ ಕೊರತೆ|
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ(ಸೆ.09): ತಾಲೂಕಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಆದರೆ ಹರಪನಹಳ್ಳಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. 100 ಹಾಸಿಗೆಯ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಹಳ್ಳಿಗಳ ರೋಗಿಗಳು ಆಗಮಿಸಿ ಪ್ರತಿದಿನ ಕೆಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹೋದರೆ, ಇನ್ನೂ ಕೆಲವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ.
ಜುಲೈನಲ್ಲಿ 90, ಆಗಸ್ಟ್ನಲ್ಲಿ 711, ಸೆ. 1ರಿಂದ 7ರ ವರೆಗೆ 170 ಕೊರೋನಾ ಕೇಸ್ ದೃಢಪಟ್ಟಿವೆ. ಕಳೆದ 6 ತಿಂಗಳಲ್ಲಿ ಒಟ್ಟು 971 ಕೊರೋನಾ ಸೋಂಕಿನ ಪ್ರಕರಣಗಳು ಹರಪನಹಳ್ಳಿ ತಾಲೂಕಿನಲ್ಲಿ ದಾಖಲಾಗಿವೆ.
ಕೋವಿಡ್ ಸಾಂಕ್ರಾಮಿಕ ರೋಗ ಆರಂಭವಾದ ನಂತರ ಈ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ನಾನ್ ಕೋವಿಡ್ ಎಂದು ವಿಭಜಿಸಲಾಗಿದೆ. ಕೋವಿಡ್‌ಗೆ 20 ಹಾಸಿಗೆಗಳನ್ನು ಸಿದ್ಧ ಮಾಡಿದ ಮೇಲೂ ತೀವ್ರ ತರಹದ ಕೋವಿಡ್ ರೋಗಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ 5 ಸೇರಿ ಒಟ್ಟು 25 ಹಾಸಿಗೆ ವ್ಯವಸ್ಥೆ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತದೆ (ಹೋಂ ಐಸೋಲೇಷನ್ ಹೊರತುಪಡಿಸಿ).
ಕೋವಿಡ್‌ಗಾಗಿ 50 ಹಾಸಿಗೆ ಮಂಜೂರಾತಿಗಾಗಿ ಜಿಲ್ಲಾ ವೈದ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಇನ್ನೂ ಕಾರ್ಯಗತವಾಗಿಲ್ಲ. ಕೋವಿಡ್ ಹೊರತುಪಡಿಸಿ ಬೇರೆ ರೋಗಿಗಳ ಆಗಮನ ಸಂಖ್ಯೆಯೂ ಹೆಚ್ಚಾಗುತ್ತಲಿದೆ.
ಇಂತಹ ಸಂಕಷ್ಟ ಸಂದರ್ಭದಲ್ಲಿ ವೈದ್ಯರ ಕೊರತೆ ಬಹಳಷ್ಟು ಎದ್ದು ಕಾಣುತ್ತದೆ, ಸ್ತ್ರೀ ರೋಗ ತಜ್ಞೆ ನಾಗವೇಣಿ ಹಾಗೂ ನೇತ್ರ ತಜ್ಞೆ ಡಾ. ಸಂಗೀತಾ ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಸರ್ಕಾರಿ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಇನ್ನೂ ರಾಜೀನಾಮೆ ಪತ್ರಗಳು ಅಂಗೀಕಾರವಾಗಿಲ್ಲ.
ಬಳ್ಳಾರಿ: ಬಡ ಶಿಕ್ಷಕಿಗೆ ಮನೆ ನಿರ್ಮಿಸಿಕೊಟ್ಟು ಗುರುಭಕ್ತಿ ಮೆರೆದ ಶಿಷ್ಯರು!
ಪಿಜಿಸಿಯನ್ ಡಾ. ಶಂಕರನಾಯ್ಕ ಹಾಗೂ ಗಂಟಲು, ಕಿವಿ, ಮೂಗು ತಜ್ಞೆ ಡಾ. ತ್ರಿವೇಣಿ ಅವರು ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ತೆಲಿಗಿ ಆಸ್ಪತ್ರೆಯಿಂದ ಒಬ್ಬರನ್ನು ಇಲ್ಲಿಗೆ ನಿಯೋಜನೆ ಮಾಡಿಯೂ ಮೇಲೆ 6 ವೈದ್ಯರು ಕರ್ತವ್ಯದಲ್ಲಿ ಇದ್ದಾರೆ. ತಾಲೂಕಿನ ತೆಲಿಗಿ ಆಸ್ಪತ್ರೆಯಿಂದ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞೆ ಒಬ್ಬರನ್ನು ಪಟ್ಟಣದ ಈ ಆಸ್ಪತ್ರೆಗೆ ನಿಯೋಜನೆ ಮಾಡಿದ್ದರೂ ಅವರು ಇಲ್ಲಿಗೆ ಬಂದಿಲ್ಲ.
ಈ ಆರು ವೈದ್ಯರು ಕೋವಿಡ್ ವಿಭಾಗ ಹಾಗೂ ಇತರ ವಿಭಾಗದಲ್ಲಿ ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಾಧಿಕಾರಿ ಡಾ. ಶಿವಕುಮಾರ ಅವರು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಆರೋಗ್ಯ ಇಲಾಖೆಯ ಆಡಳಿತ ನೋಡಿಕೊಳ್ಳುತ್ತಾರೆ.
ವೈದ್ಯರ ಕೊರತೆ ಜತೆಗೆ ಔಷಧಿ ಕೊರತೆ ಸಹ ಇದೆ. ಸಕ್ಕರೆರೋಗ ಹಾಗೂ ಬಿ.ಪಿ. ಕಾಯಿಲೆಗೆ ಸಂಬಂಧಪಟ್ಟ ಕೆಲವೊಂದು ಔಷಧಿಯ ಕೊರತೆ ಸಹ ಉಂಟಾಗಿದೆ. ಒಟ್ಟಿನಲ್ಲಿ ಕೋವಿಡ್ ಸಂಕಷ್ಟದಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ವೈದ್ಯರ ಕೊರತೆ ನೀಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಬಹಳ ತೊಂದರೆಯಲ್ಲಿದೆ ಆಸ್ಪತ್ರೆ. ಕಷ್ಟಪಟ್ಟು ಈಗಿರುವ ವೈದ್ಯರು ಕೆಲಸ ಮಾಡುತ್ತಾ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಹರಪನಹಳ್ಳಿ ತಾಲೂಕಿನ ವೈದ್ಯಾಧಿಕಾರಿ ಡಾ. ಶಿವಕುಮಾರ ಅವರು ತಿಳಿಸಿದ್ದಾರೆ.