ತುಮಕೂರು(ಮಾ.07): ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬನ್ನಿಕುಪ್ಪೆ, ಕಣಕುಪ್ಪೆ, ಬೈಚೇನಹಳ್ಳಿ ಸೇರಿದಂತೆ ಗುಬ್ಬಿ ತಾಲೂಕಿನ ಸಿ.ಎಸ್‌.ಪುರ, ಕುಣಿಗಲ್‌ ತಾಲೂಕಿನಲ್ಲಿ ನಾಲ್ಕು ಮಂದಿ ಸಾವಿಗೆ ಕಾರಣವಾಗಿರುವ ಚಿರತೆಗಳನ್ನು ಸೆರೆ ಹಿಡಿಯಬೇಕು. ಇಲ್ಲದಿದ್ದಲ್ಲಿ ಕಂಡಲ್ಲಿ ಗುಂಡಿಕ್ಕಬೇಕು ಎಂದು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೌರಿಶಂಕರ್‌ ಅವರು, ಗಮನ ಸೆಳೆಯುವ ಸೂಚನೆಯಡಿ ಅರಣ್ಯ ಸಚಿವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಚಿರತೆಗಳ ಸಂಖ್ಯೆ ಹಾಗೂ ಅವುಗಳನ್ನು ಸೆರೆಹಿಡಿಯಲು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದು, ಸೋಮವಾರ ಈ ವಿಷಯದ ಕುರಿತು ಚರ್ಚೆ ನಡೆಯುವ ಮೊದಲೇ ಸರ್ಕಾರ ನರಹಂತಕ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಬೇಕು. ಸಾಧ್ಯವಾಗದಿದ್ದಲ್ಲಿ ಕಂಡಲ್ಲಿ ಗುಂಡಿಕ್ಕಬೇಕು ಎಂಬ ಆದೇಶ ಹೊರಡಿಸಿದೆ.

ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಡಲು ಆದೇಶ

ಬೈಚೇನಹಳ್ಳಿ ಬಾಲಕಿ ಚಂದನಾ ಚಿರತೆ ದಾಳಿ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ವೇಳೆ ಬೈಚೇನಹಳ್ಳಿಗೆ ಆಗಮಿಸಿದ್ದ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರನ್ನು ನರಹಂತಕ ಚಿರತೆಗಳನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಸರ್ಕಾರದಿಂದ ಯಾವ ಆದೇಶವೂ ಬಂದಿರಲಿಲ್ಲ. ಈಗ ಸರ್ಕಾರ ನರಹಂತಕ ಚಿರತೆಗಳನ್ನು ಸೆರೆಯಿಡಿಯಲು ಅಥವಾ ಗುಂಡಿಕ್ಕಲು ಆದೇಶ ಹೊರಡಿಸಿದೆ.