ತುಮಕೂರು [ಮಾ.02]:  ಜಿಲ್ಲೆಯ ಬೈಚೇನಹಳ್ಳಿಯ ತೋಟದ ಮನೆಯಂಗಳದಲ್ಲಿ ಶನಿವಾರ ರಾತ್ರಿ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮ ಅಜ್ಜ ಅಜ್ಜಿಯ ಕಣ್ಣೆದುರೇ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಸರ್ಕಾರ ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶಿಸಿದ್ದು ಸೋಮವಾರದಿಂದಲೇ ಕಾರ್ಯಾಚರಣೆ ಪ್ರಾರಂಭವಾಗಲಿದೆ.

"

ತುಮಕೂರು, ಕುಣಿಗಲ್‌ ಹಾಗೂ ಗುಬ್ಬಿ ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿ ನಾಲ್ವರನ್ನು ಬಲಿ ತೆಗೆದುಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ನಿರಂತರ ಒತ್ತಾಯಿಸಿದ್ದರೂ ಮೀನ ಮೇಷ ಎಣಿಸುತ್ತಿದ್ದ ಸರ್ಕಾರ ಶನಿವಾರ ಘಟನೆ ಬಳಿಕ ಸಾರ್ವಜನಿಕರ ಆಕ್ರೋಶ ತೀವ್ರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದೆ.

ಬೈಚೇನಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಚಿರತೆಗೆ ಬಲಿಯಾದ ಮಗು ಚಂದನಾ ಪಾರ್ಥಿವ ಶರೀರ ದರ್ಶನ ಮಾಡಿದ ಅರಣ್ಯ ಸಚಿವ ಆನಂದ್‌ ಸಿಂಗ್‌ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಮಾಧುಸ್ವಾಮಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಚಂದನಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ್‌ ಸಿಂಗ್‌, ನರಹಂತಕ ಚಿರತೆಯನ್ನು ಗುಂಡಿಕ್ಕಿ ಕೊಲ್ಲಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕಾನೂನು ತೊಡಕು ಏನೇ ಇರಲಿ. ನಮಗೆ ಜನರ ಪ್ರಾಣವೇ ಮುಖ್ಯ. ಇದೊಂದು ಹೃದಯ ವಿದ್ರಾವಕ ಘಟನೆ. ಇನ್ನು ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಈ ನರಹಂತಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಯಾವುದೇ ಕಾನೂನು ತೊಡಕಾದರೂ ಚಿರತೆಯನ್ನು ಕೊಲ್ಲುವ ಆದೇಶದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಇಂದಿನಿಂದಲೇ ಕಾರ್ಯಾಚರಣೆ:

ಮೂರು ತಾಲೂಕಿನ ಜನರನ್ನು ಬೆಚ್ಚಿ ಬೀಳಿಸುತ್ತಿರುವ ನರಹಂತಕ ಚಿರತೆಯನ್ನು ಕೊಲ್ಲುವ ಕಾರ್ಯಾಚರಣೆ ಸೋಮವಾರದಿಂದಲೇ ಆರಂಭವಾಗಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ಅರಣ್ಯ ಸಚಿವರೊಂದಿಗೆ ಈ ಸಂಬಂಧ ಚರ್ಚಿಸಿದ್ದು ಅವರು ಸಹ ಸಮ್ಮತಿಸಿದ್ದಾರೆ. ಸೋಮವಾರದಿಂದಲೇ ನರಹಂತಕ ಚಿರತೆ ಶೂಟೌಟ್‌ ಕಾರ್ಯಾಚರಣೆ ನಡೆಯಲಿದೆ. ಒಂದೆರಡು ಚಿರತೆಗಳಿಗೆ ಗುಂಡೇಟು ಬಿದ್ದರೆ ಉಳಿದ ಚಿರತೆಗಳು ಇಲ್ಲಿಂದ ಜಾಗ ಬದಲಿಸಬಹುದು ಎಂಬ ನಿರೀಕ್ಷೆ ಇದೆ ಎಂದರು.

ಅಜ್ಜ, ಅಜ್ಜಿ ಎದುರೇ ಮಗು ಕಚ್ಚಿಕೊಂಡು ಹೋಗಿ ಕೊಂದ ಚಿರತೆ! ನಾಲ್ಕನೇ ಬಲಿ

ಇದುವರೆಗೂ ಚಿರತೆಗಳು ಮನುಷ್ಯರ ಮೇಲೆ ಬೀಳುತ್ತಿರಲಿಲ್ಲ. ಆದರೆ ಈಗ ನಾಯಿ, ದನ, ಕುರಿ, ಮೇಕೆಗಳ ಜತೆಗೆ ಮನುಷ್ಯರ ಮೇಲೂ ದಾಳಿ ಮಾಡಲು ಮುಂದಾಗಿರುವುದು ಆತಂಕಕಾರಿಯಾಗಿದ್ದು, ಇಂಥ ನರಹಂತಕ ಚಿರತೆಗಳಿಗೆ ಗುಂಡಿಕ್ಕುವುದು ಅನಿವಾರ್ಯವಾಗಿದೆ. ಇಂಥ ಘಟನೆಗಳು ಇನ್ನು ಮುಂದೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆ ಕಂಡಲ್ಲಿ ಗುಂಡಿಕ್ಕಲು ಸಚಿವರೊಂದಿಗೆ ಚರ್ಚಿಸಿ ಆದೇಶ ಕೊಡಲಾಗಿದೆ ಎಂದರು.

 ಮಗು ಪೋಷಕರಿಗೆ 10 ಲಕ್ಷ ಪರಿಹಾರಕ್ಕೆ ಶಿಫಾರಸು

ಚಿರತೆದಾಳಿಗೊಳಗಾಗಿ ಮೃತಪಟ್ಟ3 ವರ್ಷದ ಮಗು ಚಂದನಾ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಕೊಡಿಸುವುದಾಗಿ ಸಚಿವ ಆನಂದ್‌ ಸಿಂಗ್‌ ಘೋಷಿಸಿದರು. ಮಗು ಕಳೆದುಕೊಂಡಿರುವ ಪೋಷಕರ ನೋವು ನನಗೆ ಅರ್ಥವಾಗುತ್ತದೆ. ಆದರೆ ಮತ್ತೆ ಮಗುವನ್ನು ತಂದು ಕೊಡುವ ಶಕ್ತಿ ನಮಗ್ಯಾರಿಗೂ ಇಲ್ಲ. ಮಗುವಿನ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಜೊತೆಗೆ ಮಗು ಕಳೆದುಕೊಂಡಿರುವ ದಂಪತಿಗೆ 5 ವರ್ಷ ಅರಣ್ಯ ಇಲಾಖೆ ವತಿಯಿಂದ 2 ಸಾವಿರ ಮಾಸಾಶನ ನೀಡಲು ಆದೇಶಿಸಿದರು.