ಧಾರವಾಡ:(ಸೆ.26) ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಶೂಟೌಟ್ ಪ್ರಕರಣ ಜನರ ಮಾನಸದಲ್ಲಿ ಮರೆಯಾಗುವ ಮಂಚೆಯೇ ಧಾರವಾಡ ಹೊರವಲಯದಲ್ಲಿ ಬುಧವಾರ ಬೆಳಗ್ಗೆ ಮತ್ತೊಂದು ಶೂಟೌಟ್ ನಡೆದಿದೆ.

ದಾಂಡೇಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೊರಟಿದ್ದ ದಾಂಡೇಲಿ ಮೂಲದ ಶ್ಯಾಮಸುಂದರ ಮುತಕುಡಿ (42) ಎಂಬುವರು ಶೂಟೌಟ್‌ಗೆ ಬಲಿಯಾಗಿದ್ದಾರೆ. ಬೈಕ್ ಮೇಲೆ ದಾಂಡೇಲಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಧಾರವಾಡ ತಾಲೂಕಿನ ನಿಗದಿ ಬಳಿ ಕಾರು ದಾಟಿ ಬಂದು ಅಡ್ಡಗಟ್ಟಿ ಶ್ಯಾಮಸುಂದರ ಅವರಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. 

ಶ್ಯಾಮಸುಂದರ ಅವರ ಎಡಭುಜ ಸೀಳಿದ ಗುಂಡು ದೇಹದ ಒಳಗೆ ಹೋಗಿ ಹೃದಯಕ್ಕೆ ತಾಕಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೊಲೆಗೆ ರಾಜಕೀಯ ವೈಷಮ್ಯ ಎನ್ನಲಾಗುತ್ತಿದ್ದು, ಸ್ಪಷ್ಟವಾಗಿ ಕಾರಣ ಇನ್ನೂ ತಿಳಿದು ಬಂದಿಲ್ಲ. ಶ್ಯಾಮಸುಂದರ ದೆಹಲಿಯಲ್ಲಿ ಪ್ಯಾನಾಸೋನಿಕ್ ಕಂಪನಿ ಉದ್ಯೋಗಿಯಾಗಿದ್ದು ಕಳೆದ ಶನಿವಾರ ದಾಂಡೇಲಿಗೆ ಬಂದು ಪತ್ನಿ ಹಾಗೂ ಮಕ್ಕಳೊಂದಿಗೆ ಕಾಲ ಕಳೆದಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಬೆಳಗ್ಗೆ 8.30ರ ಹೊತ್ತಿಗೆ ತಮ್ಮದೇ ಕಾರಿನಲ್ಲಿ ಚಾಲಕನೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೋಗಿ ಮುಂಬೈ ಮೂಲಕ ದೆಹಲಿಗೆ ಹೊರಟಿದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಕಣ್ಣಾರೆ ಕಂಡಿರುವ ಕಾರು ಚಾಲಕ ಅಬ್ದುಲ್ ಮುತಾಲಿಬ್, ಇನ್ನೇನು ಬೈಪಾಸ್ ರಸ್ತೆ ಮೂರು ಕಿ.ಮೀ. ದೂರವಿತ್ತು. ಅಷ್ಟರಲ್ಲಿ ಮೂವರು ಬೈಕ್‌ನಲ್ಲಿ ಬಂದು ರಸ್ತೆಯಲ್ಲಿ ಅಡ್ಡ ನಿಂತರು. ಯಾರೆಂದು ಕಾರು ನಿಲ್ಲಿಸಿದಾಗ, ಶ್ಯಾಮಸುಂದರ ಅವರು ಗ್ಲಾಸ್ ಇಳಿಸಿ ವಿಚಾರಿಸುವ ಹೊತ್ತಿಗೆ ಅದರಲ್ಲಿ ಒಬ್ಬ ಭುಜದ ಬಳಿ ಗನ್ ಇಟ್ಟು ಶೂಟ್ ಮಾಡಿದ. ಇದೆಲ್ಲ ಕ್ಷಣಮಾತ್ರದಲ್ಲಿ ನಡೆದು ಹೋಯಿತು. ಕೂಡಲೇ ಅವರನ್ನು ಬೆನ್ನು ಹತ್ತಿದರೂ ಅವರು ಬೈಪಾಸ್ ಮೂಲಕ ಪರಾರಿಯಾದರು. ಆಗ, ನೇರವಾಗಿ ಸಿವಿಲ್ ಆಸ್ಪತ್ರೆಗೆ ಬಂದೆನು ಎಂದು ನಡೆದ ವೃತ್ತಾಂತವನ್ನು ಹೇಳಿದರು. 

ಕಳೆದ ವರ್ಷ ನಡೆದ ದಾಂಡೇಲಿ ನಗರಸಭೆ ಚುನಾವಣೆಗೆ ಶ್ಯಾಮಸುಂದರ ಅಣ್ಣನ ಹೆಂಡತಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ರಾಜಕೀಯ ವೈಷಮ್ಯ ಬೆಳೆದಿತ್ತು. ಅದೇ ಕೊಲೆಗೆ ಕಾರಣ ಆಗಿರಬಹುದು ಎಂದು ಮೃತರ ಸಹೋದರ ಜಾನಸನ್ ಹಾಗೂ ಪತ್ನಿ ಜಾಯಲಿಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಯ ಸುದ್ದಿ ತಿಳಿದು ಡಿವೈಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಗ್ರಾಮೀಣ ಪೊಲೀಸರು ಜಿಲ್ಲಾಸ್ಪತ್ರೆಗೆ ಆಗಮಿಸಿ ಚಾಲಕ ಹಾಗೂ ಅವರ ಸಂಬಂಧಿಕರಿಂದ ಮಾಹಿತಿ ಪಡೆದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ಆರೋಪಿಗಳ ಪತ್ತೆಗಾಗಿ ಎಸ್ಪಿ ವರ್ತಿಕಾ ಕಟಿಯಾರ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.