ಸಾಗರ[ಸೆ.06]: ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ರಂಗಕರ್ಮಿ ಕಾಗೋಡು ಅಣ್ಣಪ್ಪ ಬುಧವಾರ ಸಂಜೆ 4.30ಕ್ಕೆ ನಿಧನರಾದರು. ಅವರಿಗೆ 72ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಸೋದರ ಸಂಬಂಧಿಯಾಗಿದ್ದ ಕಾಗೋಡು ಅಣ್ಣಪ್ಪನವರು ಅಣ್ಣಾಜಿ ಎಂದೇ ಕರೆಯಲ್ಪಡುತ್ತಿದ್ದರು.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಣ್ಣಪ್ಪ ಕಳೆದ 10-12 ದಿನಗಳಿಂದ ತೀವ್ರ ಅಸ್ವಸ್ಥರಾಗಿ ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. ಇಂದು ಬೆಳಗ್ಗೆ 7ರಿಂದ 10ಗಂಟೆಯವರೆಗೆ ಪಟ್ಟಣದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ.

ಹಿರಿಯ ಕಾಂಗ್ರೆಸ್ಸಿಗರಾಗಿದ್ದ ಅಣ್ಣಾಜಿ ಪಕ್ಷ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. 2003ರಲ್ಲಿ ತಾಳಗುಪ್ಪ ಕ್ಷೇತ್ರದಿಂದ ಜಿಪಂ ಸದಸ್ಯರಾಗಿದ್ದ ಅವರು ನಂತರ 2 ಅವಧಿಯಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹಾಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅವರು ಆವಿನಹಳ್ಳಿ ಕ್ಷೇತ್ರ ದಿಂದ ಆಯ್ಕೆಯಾಗಿದ್ದರು. ಕಾಗೋಡು ತಿಮ್ಮಪ್ಪನವರ ರಾಜಕೀಯ ಪ್ರಯಾಣದಲ್ಲಿ
ಅಣ್ಣಾಜಿಯವರ ಕೊಡುಗೆ ಅನನ್ಯವಾಗಿದೆ. ತಿಮ್ಮಪ್ಪನವರು ಶಾಸಕರಾಗಿದ್ದಾಗ, ಮಂತ್ರಿಯಾಗಿದ್ದಾಗ ಸಾಗರ ಕ್ಷೇತ್ರದಲ್ಲಿ ಅವರ ಛಾಯಾನುವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. 

ಸಾಂಸ್ಕೃತಿಕ ವ್ಯಕ್ತಿ: ಕಾಗೋಡು ಅಣ್ಣಪ್ಪನವರು ಕೇವಲ ರಾಜಕಾರಣಿಯಾಗಿರಲಿಲ್ಲ. ಒಬ್ಬ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು. ತಮ್ಮ ಕಾಲೇಜು ದಿನಗಳ ಕಾಲದಲ್ಲಿಯೇ ಅಣ್ಣಪ್ಪನವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದರು. ಸಾಗರದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿರುವ ಕಾಗೋಡು ತಿಮ್ಮಪ್ಪ ರಂಗಮಂದಿರ ಅಣ್ಣಪ್ಪನವರ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ನಿಂತಿದೆ. ರಂಗಮಂಚ ಕಾಗೋಡು ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಹತ್ತು ಹಲವು ರಂಗ ಚಟುವಟಿಕೆಗಳನ್ನು ನಡೆಸಿದ್ದಾರೆ. ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರ ಅಭಿನಯದ ಬೆತ್ತಲೆ ಸೇವೆ ನಾಟಕ ರಾಜ್ಯದಾದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯ ವತಿಯಿಂದ ನಾಟಕ ಸಪ್ತಾಹ, ಜಾನಪದ ಉತ್ಸವಗಳನ್ನು ನಡೆಸಿದ್ದಾರೆ. ಸಾಹಿತ್ಯ ಪ್ರೀತಿ ಹೊಂದಿದ್ದ ಅವರ ಮನೆಯಲ್ಲಿ ನಾಡಿನ ಹೆಸರಾಂತ ಲೇಖಕರ ಗ್ರಂಥಗಳ ಭಂಡಾರವೇ ಇದೆ.

ಕಂಬಾರರ ಒಡನಾಡಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಒಡನಾಡಿಯಾಗಿದ್ದ ಅಣ್ಣಪ್ಪನವರು ಕಾಗೋಡು ತಿಮ್ಮಪ್ಪ ರಂಗಮಂದಿರದ ವೇದಿಕೆಗೆ ಕಂಬಾರರ ಹೆಸರನ್ನೇ ಇಟ್ಟಿದ್ದಾರೆ. ಕಂಬಾರರು ಹಂಪಿ ವಿವಿ ಕುಲಪತಿಯಾಗಿದ್ದಾಗ ಸೆನೆಟ್ ಸದಸ್ಯರಾಗಿದ್ದರು. ಕಂಬಾರರು ಈ ಭಾಗಕ್ಕೆ ಬಂದಾಗಲೆಲ್ಲ ಅಣ್ಣಪ್ಪನವರ ಮನೆಯಲ್ಲಿಯೇ ಉಳಿಯುತ್ತಿದ್ದರು. ಕಂಬಾರರ ಜೊತೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದರು. ರಂಗಮಂದಿರ ಕಟ್ಟುವಾಗ ಪ್ರತಿ ಹಂತದಲ್ಲಿ ಕಂಬಾರರ ಸಲಹೆ ಪಡೆದಿದ್ದರು. ಸ್ನೇಹಜೀವಿ ಕಾಗೋಡು ಅಣ್ಣಪ್ಪನವರ ನಿಧನದಿಂದ ಕೇವಲ ರಾಜಕೀಯ ಕ್ಷೇತ್ರ ಮಾತ್ರವಲ್ಲ ಸಾಂಸ್ಕೃತಿಕ ಕ್ಷೇತ್ರಕ್ಕೂ ದೊಡ್ಡ ನಷ್ಟ ಉಂಟಾಗಿದೆ. ಕಾಗೋಡು ತಿಮ್ಮಪ್ಪನವರ ಬಲಗೈನಂತಿದ್ದ ಅಣ್ಣಪ್ಪನವರ ನಿಧನದಿಂದ ಸಾಗರದ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಶೂನ್ಯ ಏರ್ಪಟ್ಟಿದೆ.

ಕಾಗೋಡು ಅಣ್ಣಪ್ಪ ಅವರ ನಿಧನಕ್ಕೆ ನಾ. ಡಿಸೋಜ, ಶಾಸಕ ಹರತಾಳು ಹಾಲಪ್ಪ, ಮಾಜಿ ಸಂಸದ ಬಿ.ವೈ ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.