ಶಿವಮೊಗ್ಗ(ಸೆ.10): ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ಸವಾರರ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ಶಿವಮೊಗ್ಗ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರಿ ನಿಯಮಗಳು ಸೂಕ್ತ ರೀತಿಯಲ್ಲಿ ಪಾಲನೆ ಆಗಲಿ ಎಂಬ ಸದುದ್ದೇಶದಿಂದ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಸೆ. 12ರಿಂದ ಪ್ರತಿದಿನ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ವಾಹನ ಸವಾರರು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ವಿಮೆ, ನೋಂದಣಿ ಸ್ಮಾರ್ಟ್‌ಕಾರ್ಡ್‌, ವಾಯು ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರಗಳನ್ನು ವಾಹನದೊಂದಿಗೆ ಇಟ್ಟುಕೊಳ್ಳಲು ಸೂಚಿಸಿದ್ದಾರೆ.

ಯಾವೆಲ್ಲಾ ವಿಚಾರದಲ್ಲಿ ವಿಶೇಷ ತಪಾಸಣೆ:

ವಿಶೇಷವಾಗಿ ವಾಹನ ಸವಾರರು ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸಿರುವ ಬಗ್ಗೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ರಾತ್ರಿ ವೇಳೆಯಲ್ಲಿ ವಾಹನಗಳಿಗೆ ಹೆಲೋಜನ್‌ ಲೈಟ್‌ಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ತಪಾಸಣೆ ಮಾಡಲಾಗುವುದು. ಸಾರಿಗೆ ವಾಹನಗಳಲ್ಲಿ ಕರ್ಕಶ ಶಬ್ಧ ಮಾಡುವ ಹಾರ್ನ್‌ಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಹಾಗೂ ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತು ತಪಾಸಣೆ ಮಾಡಲಾಗುವುದು.

ದಾಖಲೆಗಳಿರುವುದು ಕಡ್ಡಾಯ:

ಕೇಂದ್ರ ಸರ್ಕಾರದ ಇತ್ತೀಚಿನ ತಿದ್ದುಪಡಿ ಅನ್ವಯ ವಾಹನ ಚಾಲಕರು ಮಾಡುವ ತಪ್ಪುಗಳಿಗೆ ದಂಡ ಪರಿಷ್ಕೃತಗೊಂಡಿದ್ದು, ಸಾರ್ವಜನಿಕರು ವಾಹನಗಳ ಚಾಲ್ತಿ ದಾಖಲೆಗಳನ್ನು ಕಡ್ಡಾಯವಾಗಿ ವಾಹನಗಳಲ್ಲಿ ಇಟ್ಟುಕೊಂಡು ಸಂಚಾರ ನಿಯಮಗಳನ್ನು ಚಾಚುತಪ್ಪದೇ ಪಾಲಿಸಿ, ಸಾರ್ವಜನಿಕರ ಜೀವ ಸುರಕ್ಷತೆಗೆ ಸಹಕರಿಸುವಂತೆ ಸಾಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಯಾವುದಕ್ಕೆ ಎಷ್ಟು ದಂಡ:

ಪರಿಷ್ಕೃತಗೊಂಡ ದಂಡ ಪ್ರಕಾರ ಅಪ್ರಾಪ್ತ ಮಕ್ಕಳು ವಾಹನ ಚಾಲನೆಗೆ 5 ಸಾವಿರ ಹಾಗೂ ಪೋಷಕರಿಗೆ 5 ಸಾವಿರ, ಚಾಲನಾ ಲೈಸೆನ್ಸ್‌ ಇಲ್ಲದೆ ವಾಹನ ಚಾಲನೆಗೆ 5 ಸಾವಿರ, ಹೆಲ್ಮೆಟ್‌ ಇಲ್ಲದೆ ವಾಹನ ಚಾಲನೆಗೆ 1 ಸಾವಿರ, ಸೀಟ್‌ ಬೆಲ್ಟ್‌ ಧರಿಸದೆ ಲಘು ವಾಹನ ಚಾಲನೆಗೆ 1 ಸಾವಿರ, ವಿಮೆ ಇಲ್ಲದೆ ವಾಹನ ಚಾಲನೆಗೆ 2 ಸಾವಿರ, ನೋಂದಣಿ ಇಲ್ಲದೆ ವಾಹನ ಚಾಲನೆಗೆ 5 ಸಾವಿರ, ನಿಗದಿತ ಆಸನಗಳಿಗಿಂತ ಹೆಚ್ಚು ಪ್ರಯಾಣಿಕರ ಸಾಗಾಣಿಕೆಗೆ ಪ್ರತಿ ಪ್ರಯಾಣಿಕರಿಗೆ 200, ಅಪಾಯಕಾರಿ ಚಾಲನೆಗೆ 5 ಸಾವಿರ, ವಾಹನದ ಕರ್ಕಶ ಶಬ್ಧ ಮಾಲಿನ್ಯಕ್ಕೆ 2 ಸಾವಿರ ಹಾಗೂ ರಹದಾರಿ ಇಲ್ಲದೆ ವಾಹನ ಚಾಲನೆಗೆ 10 ಸಾವಿರ ರು.ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್‌ ರದ್ದತಿಗೆ ಮುಂದಾದ ಸರ್ಕಾರ