ಕೊರೋನಾ ನಿಯಂತ್ರಣಕ್ಕೆ ಸಿಎಂ ತವರು ಜಿಲ್ಲೆಯಲ್ಲಿ ಮಹತ್ವದ ತೀರ್ಮಾನ..!
ಕೊರೋನಾ ವೈರಸ್ ನಿಯಂತ್ರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಪ್ರಕಟಿಸಿದ್ದಾರೆ.
ಶಿವಮೊಗ್ಗ, (ಜುಲೈ.15): ಕೊರೋನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಜುಲೈ 16ರಿಂದ ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಮಧ್ಯಾಹ್ನ 2ರ ನಂತರ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತಿದೆ.
ಸರ್ಕಾರಿ ಕಚೇರಿಗಳು, ಕೃಷಿ, ವೈದ್ಯಕೀಯ ಮತ್ತು ಇತರ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು
ಮುಂದಿನ ಆದೇಶದವರೆಗೂ ಶಿವಮೊಗ್ಗ ಜಿಲ್ಲಾದ್ಯಂತ ನಾಳೆಯಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೂ ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಕೊರೋನಾ ವಿಚಾರದಲ್ಲಿ ಶ್ರೀರಾಮುಲು ಅಸಹಾಯಕತೆ: ಜನ ಸಾಮಾನ್ಯರ ಗತಿ...?
ಈ ಬಗ್ಗೆ ಇಂದು (ಬುಧವಾರ) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಈ ನಿರ್ಧಾರ ಪ್ರಕಟಿಸಿದರು.
ಮಧ್ಯಾಹ್ನ 2ರ ನಂತರ ಜೀವನಾವಶ್ಯಕ ಸಾಮಗ್ರಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ, ಮುಂಗಟ್ಟುಗಳನ್ನೂ ಬಂದ್ ಮಾಡಿಸಲಾಗುವುದು. ಪ್ರತಿ ದಿನ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಜನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಪರಿಣಾಮಕಾರಿಯಾಗಿ ಭಾಗಶಃ ಲಾಕ್‌ಡೌನ್ ಜಾರಿಗೊಳಿಸಲು ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯಾವುದೇ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶ ಇಲ್ಲ. ಎಲ್ಲಾ ಹಬ್ಬಗಳನ್ನೂ ಮನೆಗಳಲ್ಲಿ ಆಚರಿಸಬಹುದು. ಮದುವೆ, ಅಂತ್ಯಸಂಸ್ಕಾರ ಚಟುವಟಿಕೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಮಾನದಂಡ ಕಟ್ಟುನಿಟ್ಟಿನಿಂದ ಪಾಲಿಸಬೇಕು. ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗೂಡುವುದು, ಮಾಸ್ಕ್ ಧರಿಸದೇ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಧಾರವಾಡ, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟು ತೆರೆಯಲು ಸಮಯ ನಿಗದಿಪಡಿಸಲಾಗಿದೆ.