ಹೊಸ ಸ್ಟಾಕ್‌ ಬರ್ತಾ ಇಲ್ಲ; ಬೇಕಾದ ಬ್ರಾಂಡ್‌ ಸಿಗ್ತಿಲ್ಲ; ಶಿವಮೊಗ್ಗದಲ್ಲಿ ಮದ್ಯ ಪ್ರಿಯರ ಪರದಾಟ

ಲಾಕ್‌ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗಲೇ ಶಿವಮೊಗ್ಗ ಮಂದಿಗೆ ಹಲ್ಲಿದ್ದರು ಕಡಲೆಯಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಒಂದು ಕಡೆ ಹೊಸ ಸ್ಟಾಕ್‌ ಬರ್ತಾ ಇಲ್ಲ ಮತ್ತೊಂದು ಕಡೆ ಬೇಕಾದ ಬ್ರಾಂಡ್‌ ಸಿಗ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Shivamogga tipplers unhappy over non availability of favourite Brands

ಶಿವಮೊಗ್ಗ(ಮೇ.07): ಹೊಸ ಸ್ಟಾಕ್‌ ಬರ್ತಾ ಇಲ್ಲ. ಹಳೆ ಸ್ಟಾಕ್‌ ಸಿಕ್ತಾ ಇಲ್ಲ. ಅದ್ರಲ್ಲೂ ಕೂಲಿ, ಕಾರ್ಮಿಕರು ಹಾಗೂ ಶ್ರಮಿಕ ವರ್ಗದವರ ನೆಚ್ಚಿನ ಬ್ರಾಂಡ್‌ಗಳಂತೂ ಇಲ್ವೆ ಇಲ್ಲ. ಇದು ಸುಮಾರು 42 ದಿನದ ಲಾಕ್‌ ಡೌನ್‌ ನಂತರ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟನಂತರ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ದೃಶ್ಯ.

ನಿರೀಕ್ಷೆ ಇಲ್ಲದೆ ಲಾಕ್‌ಡೌನ್‌ ಜಾರಿಯಾದ ನಂತರ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯ ಪ್ರಿಯರು ಇದೀಗ ತಮ್ಮಿಷ್ಟದ ಬ್ರಾಂಡ್‌ ಸಿಗದೆ ಪರಿತಪಿಸುತ್ತಿದ್ದಾರೆ. ಸುದೀರ್ಘಾವಧಿ ನಂತರ ಮದ್ಯದಂಗಡಿ ತೆರೆದ ನಂತರ ತಮ್ಮಿಷ್ಟದ ಗುಂಡು ಹಾಕಲು ಮುಂದಾಗಿದ್ದ ಮದ್ಯ ಪ್ರಿಯರು ವೈನ್‌ ಶಾಪ್‌ ಹಾಗೂ ಎಂಎಸ್‌ಐಎಲ್‌ ಮಳಿಗೆಯಲ್ಲಿ ಕೆಲವೇ ಕೆಲವು ಬ್ರಾಂಡ್‌ ಸಿಗುತ್ತಿರುವುದರಿಂದ ಬೇಸರಗೊಂಡಿದ್ದಾರೆ.

ಬ್ರಾಂಡ್‌ಗಳ ಕೊರತೆ:

ಜಿಲ್ಲೆಯಲ್ಲಿ ಸುಮಾರು ಒಂದೂವರೆ ತಿಂಗಳ ನಂತರ ತೆರೆದಿರುವ ವೈನ್‌ಶಾಪ್‌ ಹಾಗೂ ಎಂಎಸ್‌ಐಎಲ್‌ ಮಳಿಗೆಯಲ್ಲಿ ಬ್ರಾಂಡ್‌ ಮದ್ಯದ ಕೊರತೆ ಎದುರಾಗಿದೆ. ಅದರಲ್ಲೂ ಬಡ, ಮಧ್ಯಮ ಹಾಗೂ ಶ್ರಮಿಕ ವರ್ಗದವರು ಬಳಸುವ ಬ್ರಾಂಡ್‌ಗಳೂ ಸಿಗುತ್ತಿಲ್ಲ.

ಮದ್ಯ ನಿಷೇಧ ಮುಂದುವರಿಸಲು ಮಹಿಳೆಯರ ಆಗ್ರಹ

ಲಾಕ್‌ಡೌನ್‌ಗಿಂತ ಮೊದಲು ಒಂದಿಷ್ಟು ಸ್ಟಾಕ್‌ ಇಟ್ಟುಕೊಂಡಿದ್ದ ಮೇಲ್ವರ್ಗದವರು ಹಾಗೂ ಶ್ರೀಮಂತರು ಹಾಗೂ ಹೀಗೂ ಮದ್ಯದ ರುಚಿ ನೋಡಿದ್ದರು. ಆದರೆ ಲಾಕ್‌ಡೌನ್‌ ಪರಿವೇ ಇಲ್ಲದ ಬಡವರು ಹಾಗೂ ಶ್ರಮಿಕ ವರ್ಗದವರ ಹನಿ ಹನಿ ಮದ್ಯಕ್ಕೂ ಪರಿತಪಿಸಿದ್ದರು. ಕೊನೆಗೂ ಸರ್ಕಾರದ ನಿರ್ಧಾರದ ಮೇರೆಗೆ ಮದ್ಯದಂಗಡಿ ತೆರೆದಿವೆ. ವೈನ್‌ ಶಾಪ್‌ ಹಾಗೂ ಎಂಎಸ್‌ಐಎಲ್‌ ಮಳಿಗೆ ತೆರೆಯುವುದನ್ನೇ ಎದುರು ನೋಡುತ್ತಿದ್ದ ಬಡ ಹಾಗೂ ಶ್ರಮಿಕರು ತಮಗೆ ಬೇಕಾದ ಬ್ರಾಂಡ್‌ ಸಿಗುತ್ತಿಲ್ಲವಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದಾರೆ.

ದುಬಾರಿ ಮದ್ಯವೇ ಹೆಚ್ಚು:

ಇನ್ನು ಜಿಲ್ಲೆಯಲ್ಲಿ ತೆರೆದಿರುವ 130 ವೈನ್‌ ಶಾಪ್‌ ಹಾಗೂ 29 ಎಂಎಸ್‌ಐಎಲ್‌ ಮಳಿಗೆಯಲ್ಲಿರುವ ಮದ್ಯಗಳಲ್ಲಿ ಕಡಿಮೆ ಬೆಲೆಯ ಮದ್ಯಕ್ಕಿಂತ ದುಬಾರಿ ದರದ ಮದ್ಯದ ಲಭ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಸಾವಿರ ರು.ಗಿಂತ ಹೆಚ್ಚಿನ ಬೆಲೆಯ ದರದ ಸ್ಕಾಚ್‌ ಖರೀದಿಸುವುದು ಕಷ್ಟದ ಮಾತು. ದುಡಿಮೆ ಇಲ್ಲದೆ ಕಂಗೆಟ್ಟಿರುವ ನಮಗೆ ನಾವು ಹಿಂದಿನಿಂದಲೂ ಸವಿಯುತ್ತಿರುವ ಕಡಿಮೆ ಬೆಲೆಯ ಮದ್ಯವೇ ಹೆಚ್ಚು ಇಷ್ಟ. ಆದರೆ 100 ರಿಂದ 200 ರು. ಒಳಗಿರುವ ಮದ್ಯವನ್ನು ಕೇಳಿದರೆ ಸ್ಟಾಕ್‌ ಇಲ್ಲ ಎನ್ನುತ್ತಾರೆ. ಒಂದು ವೇಳೆ ಸಿಕ್ಕರೂ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಯಾಗುತ್ತದೋ ಎಂಬ ಕಾರಣಕ್ಕೆ ಖರೀದಿಸಿದವರೇ ಮತ್ತೆ ಮತ್ತೆ ಕಡಿಮೆ ಬೆಲೆಯ ಮದ್ಯವನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಕಡಿಮೆ ಬೆಲೆಯ ಅವರಿಷ್ಟದ ಬ್ರಾಂಡ್‌ ಸಿಗದಂತಾಗಿದೆ ಎಂದು ಮದ್ಯ ಪ್ರಿಯರು ಆರೋಪಿಸುತ್ತಾರೆ.

ಕೆಎಸ್‌ಬಿಸಿಎಲ್‌ ಕಾರಣವೇ?:

ಇನ್ನು ವೈನ್‌ಶಾಪ್‌ ಮಾಲೀಕರ ಪ್ರಕಾರ ಜಿಲ್ಲೆಯಲ್ಲಿ ಮದ್ಯ ಪ್ರಿಯರಿಗೆ ಕಡಿಮೆ ಬೆಲೆಯ ಮದ್ಯ ಸಿಗದಿರುವುದಕ್ಕೆ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌)ವೇ ಕಾರಣ. ಶಿವಮೊಗ್ಗ ಜಿಲ್ಲೆಗೆ ಮದ್ಯ ಪೂರೈಸುತ್ತಿರುವ, ಎಪಿಎಂಸಿ ಆವರಣದಲ್ಲಿರುವ ಕೆಎಸ್‌ಬಿಸಿಎಲ್‌ ಗೋದಾಮು ಅವ್ಯವಸ್ಥೆಯ ತಾಣವಾಗಿದೆ. ವೈನ್‌ ಶಾಪ್‌ಗಳಿಂದ ಬೇಡಿಕೆ ಪಡೆದಿರುವ ಕೆಎಸ್‌ಬಿಸಿಎಲ್‌ ಗೋದಾಮಿನಲ್ಲಿ ಸರಿಯಾದ ಸೌಕರ್ಯವೇ ಇಲ್ಲ. ಜನರೇಟರ್‌, ಪ್ರಿಂಟಿಂಗ್‌, ಬ್ಯಾಟರಿ ಸೇರಿದಂತೆ ಪ್ರತಿಯೊಂದೂ ಹಾಳಾಗಿದೆ. ಇಡೀ ಗೋದಾಮಿಗೆ ಗೋದಾಮೇ ಅವ್ಯವಸ್ಥೆಯ ತಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈನ್‌ ಶಾಪ್‌ಗಳಿಂದ ಪಡೆದಿರುವ ಬೇಡಿಕೆಯನ್ನು ಬ್ರಾಂಡ್‌ಗೆ ಅನುಸಾರವಾಗಿ ಪೂರೈಸುವುದು ಕಷ್ಟ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎಂ.ಗೌಡ ಹೇಳುತ್ತಾರೆ.

ಜಿಲ್ಲೆಯ ಬಹುತೇಕ ವೈನ್‌ಶಾಪ್‌ ಹಾಗೂ ಎಂಎಸ್‌ಐಎಲ್‌ ಮಳಿಗೆಯ ಒಟ್ಟಾರೆ ವಹಿವಾಟಿನಲ್ಲಿ ದುಬಾರಿ ದರ ಮದ್ಯಕ್ಕಿಂತ ಕಡಿಮೆ ಬೆಲೆಯ ಮದ್ಯದ ಮಾರಾಟದ ಪ್ರಮಾಣವೇ ಹೆಚ್ಚು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಬೆಲೆಯ ಮದ್ಯ ಸಿಗುವುದು ಕಷ್ಟ. ಹಾಗಾಗಿ ದುಬಾರಿ ದರ ಮದ್ಯ ಖರೀದಿಸಲಾಗದೆ, ತಮ್ಮಿಷ್ಟದ ಬ್ರಾಂಡ್‌ ಬದಲಾಯಿಸಲೂ ಆಗದೆ ಮದ್ಯ ಪ್ರಿಯರು ಪರಿತಪಿಸುತ್ತಿದ್ದಾರೆ.

ಲಾಕ್‌ಡೌನ್‌ ಜಾರಿಯಾಗುವ ಮೊದಲು ಇದ್ದ ಹಳೆ ದಾಸ್ತಾನೇ ಜಿಲ್ಲೆಯ ಎಂಎಸ್‌ಐಎಲ್‌ ಹಾಗೂ ವೈನ್‌ ಶಾಪ್‌ಳಲ್ಲಿ ಮಾರಾಟವಾಗುತ್ತಿದೆ. ಮದ್ಯ ತಯಾರಿಕಾ ಡಿಸ್ಟಲರಿಗಳ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಅದು ಬೆಂಗಳೂರಿನಿಂದ ಇಲ್ಲಿಗೆ ಬರಲು ಕನಿಷ್ಠ ಮೂರ್ನಾಲ್ಕು ದಿನವಾದರೂ ಬೇಕು. ಜೊತೆಗೆ ಹೊಸ ಸ್ಟಾಕ್‌ ಹೊಸ ದರದ ಲೇಬಲ್‌ನೊಂದಿಗೆ ಬರಬೇಕು. ಅಲ್ಲಿ ತನಕ ಮದ್ಯ ಪ್ರಿಯರು ಸ್ವಲ್ಪ ತಾಳ್ಮೆಯಿಂದ ಇರಬೇಕು.

-ಕ್ಯಾಪ್ಟನ್‌ ಅಜಿತ್‌ ಕುಮಾರ್‌, ಅಬಕಾರಿ ಡಿಸಿ, ಶಿವಮೊಗ್ಗ
 

Latest Videos
Follow Us:
Download App:
  • android
  • ios