ಶಿವಮೊಗ್ಗದಲ್ಲಿ ಮದ್ಯ ನಿಷೇಧ ಮುಂದುವರಿಸಲು ಮಹಿಳೆಯರ ಆಗ್ರಹ
ಲಾಕ್‌ಡೌನ್ ಸಂದರ್ಭದಲ್ಲಿ ಮಾಡಲಾಗಿದ್ದ ಮದ್ಯ ನಿಷೇಧವನ್ನು ಮುಂದುವರೆಸುವಂತೆ ಶಿವಮೊಗ್ಗದ ಶಾಶ್ವತಿ ಮಹಿಳಾ ವೇದಿಕೆ ಆಗ್ರಹಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.07): ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮುಂದುವರಿಸಬೇಕು ಎಂಗು ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆ ವತಿಯಿಂದ ಬುಧವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೋವಿಡ್ -19 ಸಮಸ್ಯೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು 3ನೇ ಹಂತದಲ್ಲಿ 14 ದಿನ ಲಾಕ್‌ಡೌನ್ ಮಾಡಿರುವುದು ಒಳ್ಳೆಯ ನಿರ್ಧಾರವಾಗಿದೆ. ಆದರೆ ಮದ್ಯದ ಅಂಗಡಿ ತೆಗೆಯುವುದಕ್ಕೆ ಈ ತಕ್ಷಣವೇ ಅವಕಾಶ ಮಾಡಿಕೊಡುವುದು ಬೇಡ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆರ್ಥಿಕವಾಗಿ ದೇಶಕ್ಕೆ ಸಮಸ್ಯೆ ಎದುರಾಗಿದೆ. ಕೂಲಿ ಕಾರ್ಮಿಕರ ಪರಿಸ್ಥಿತಿ ತುಂಬಾ ಕಷ್ಟದ ಸ್ಥಿತಿಯಲ್ಲಿದೆ. ಕೊರೋನಾದ ವಿರುದ್ಧ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಸಮಾಜ ಸೇವಾಕರ್ತರು, ಸೈನಿಕರು, ಪೊಲೀಸರು ಪ್ರತಿದಿನ 24 ಗಂಟೆಗಳ ಕಾಲ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪರಿಶ್ರಮ ಪಡುತ್ತಿದ್ದಾರೆ. ಆದರೆ ಮದ್ಯ ವ್ಯಸನಿಗಳು ರಸ್ತೆಯಲ್ಲಿ ಹೊಡೆದಾಟ, ಮೋಜುಮಸ್ತಿ ಮಾಡುತ್ತಿದ್ದಾರೆ ಎಂದು ದೂರಿದರು.
ಕಡಿಮೆಯಾಗಿಲ್ಲ ಮದ್ಯಪ್ರೇಮಿಗಳ ಖರೀದಿ ಉತ್ಸಾಹ
ನಮ್ಮ ದೇಶದ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ದುಶ್ಚಟವೇ ಅವರಿಗೆ ಮುಖ್ಯವಾಗಿದೆ. ಮದ್ಯ ವ್ಯಸನಿಗಳ ಮನೆಗಳಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗತ್ತದೆ ಎಂದು ಇಷ್ಟುಬೇಗ ಮದ್ಯ ಮಾರಾಟ ಆರಂಭಿಸಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಆದಾಯ ಪಡೆಯುವುದಕ್ಕೆ ಬೇರೆ ಮಾರ್ಗದಲ್ಲಿ ಪ್ರಯತ್ನ ಮಾಡಬೇಕು. ಕರ್ನಾಟಕ ರಾಜ್ಯ ಮದ್ಯ ಮುಕ್ತವಾಗಬೇಕು ಎಂದು ಒತ್ತಾಯಿಸಿದರು.
ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಆದರೆ ಮದ್ಯವ್ಯಸನಿಗಳು ಕುಡಿದ ಅಮಲಿನಲ್ಲಿ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಕೊರೋನಾ ವೈರಸ್ ಹರಡಲು ಕಾರಣ ಕರ್ತರಾಗುತ್ತಿದ್ದಾರೆ. ಆದ ಕಾರಣ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ತಕ್ಷಣ ನಿಷೇದ ವಿಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಂತಾ ಸುರೇಂದ್ರ, ನಂದಿನಿ, ಪ್ರೇಮಾ, ಲಲಿತಾ ಮತ್ತಿತರರು ಉಪಸ್ಥಿತರಿದ್ದರು.