ಶಿವಮೊಗ್ಗ(ಮೇ.02): ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕಾಲಿಗೆ ಬಿದ್ದ ತಹಶೀಲ್ದಾರ್‌ ಎನ್‌.ಜೆ.ನಾಗರಾಜ್‌ ಹಾಗೂ ಕಂದಾಯ ಅಧಿಕಾರಿ ವಿಜಯ್‌ಕುಮಾರ್ ಅವರನ್ನ ಅಮಾನತ್ತು ಮಾಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು ಆಗ್ರಹಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾತನಾಡಿದ ಅವರು, ತಾಲ್ಲೂಕು ದಂಡಾಧಿಕಾರಿ ಹುದ್ದೆಯಲ್ಲಿ ಇರುವ ವ್ಯಕ್ತಿ ರಸ್ತೆಯಲ್ಲಿ ಸಚಿವರ ಕಾಲಿಗೆ ಬೀಳುವುದು ಅಮಾನವೀಯ ಘಟನೆಯಾಗಿದೆ. ಹೀಗಾಗಿ ಶಿವಮೊಗ್ಗ ತಹಶಿಲ್ದಾರ್ ನಾಗರಾಜ್, ವಿಜಯ ಕುಮಾರ್, ವಿ.ಎ ಅರುಣ್ ಕುಮಾರ್ ಅವರನ್ನು ತಕ್ಷಣವೇ ಅಮಾನತ್ತು ಮಾಡಲು ಆಗ್ರಹ ಪಡಿಸಿದ್ದಾರೆ. 

ಘಟನೆ ಹಿನ್ನಲೆ:

ತಮ್ಮ ಖಡಕ್‌ ಶೈಲಿಯಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ್‌ ಗಿರೀಶ್‌ ವರ್ಗಾವಣೆಗೊಂಡ ಬಳಿಕ ಆ ಸ್ಥಾನಕ್ಕೆ ನಿಯುಕ್ತಿಗೊಂಡ ನಾಗರಾಜ್‌ ಗುರುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೆ ಮುನ್ನ ಇವರು ಚೆನ್ನಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಶಂಕರಮೂರ್ತಿಗೆ ಮೋದಿ ದೂರವಾಣಿ ಕರೆ, ಸಹಪಾಠಿ ಆರೋಗ್ಯ ವಿಚಾರಿಸಿದ ಪ್ರಧಾನಿ

ಶುಕ್ರವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಓಂ ಶಕ್ತಿ ಸಂಘಟನೆಯಿಂದ ಬಡವರಿಗೆ ಆಹಾರದ ಕಿಟ್‌ ಹಂಚುವ ಕಾರ್ಯಕ್ರಮಕ್ಕೆಂದು ಹಳೆ ತೀರ್ಥಹಳ್ಳಿ ರಸ್ತೆಗೆ ಆಗಮಿಸಿದ ವೇಳೆ ಅಲ್ಲಿಗೆ ಆಗಮಿಸಿದ ನಾಗರಾಜ್‌ ದಿಢೀರನೆ ಸಚಿವರ ಕಾಲಿಗೆ ಎರಗಿದರು. ಇದರ ಬೆನ್ನಲ್ಲೇ ಜೊತೆಗಿದ್ದ ಕಂದಾಯ ಅಧಿಕಾರಿ ವಿಜಯ್‌ಕುಮಾರ್‌ ಕೂಡಾ ಕಾಲಿಗೆ ಬಿದ್ದರು. ಈ ಘಟನೆ ಕಂಡು ಸಾರ್ವಜನಿಕರು ಒಂದು ಕ್ಷಣ ಆವಕ್ಕಾದರು. ತಾಲೂಕು ದಂಡಾಧಿಕಾರಿಯೂ ಆದ ತಹಶೀಲ್ದಾರ್‌ ಅವರ ಈ ವರ್ತನೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಎದುರಾಗಿದೆ.