ಅಂದು ಎಲ್ಲರ ಬಳಿ ಹುಚ್ಚ ಎನಿಸಿಕೊಂಡವ ಈಗ ಶಿಸ್ತಿನ ಸಿಪಾಯಿ !
ಮಾನವೀಯತೆಯ ನಡೆಯಿಂದ ಬದುಕು ಕಂಡುಕೊಂಡ ಮಾನಸಿಕ ಅಸ್ವಸ್ಥನೊಬ್ಬನ ಕತೆ ಇಲ್ಲಿದೆ ಎಂದು ಅರಿವಾದಾಗ ನಿಜಕ್ಕೂ ಅಚ್ಚರಿಯಾಗುತ್ತದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ [ಸೆ.18]: ಶಿವಮೊಗ್ಗದ ನ್ಯಾಯಾಲಯದ ಸಂಕೀರ್ಣದ ಹಿಂಭಾಗದಲ್ಲಿರುವ ವಕೀಲರ ಭವನದ ಬಳಿ ನೀವೇನಾದರೂ ಹೋದರೆ ಮಿಲಿಟರಿ ಡ್ರೆಸ್‌ನಲ್ಲಿರುವ ವ್ಯಕ್ತಿ ಪಟ್ಟೆಂದು ಕಾಲು ನೆಲಕ್ಕೆ ಊರಿ ಸೆಲ್ಯೂಟ್ ಹೊಡೆಯುತ್ತಾನೆ. ಹೀಗೆ ಹೊಡೆದಾಗ ಒಮ್ಮೆ ಗಾಬರಿಯಾಗುತ್ತದೆ. ಬಂದವರೆಲ್ಲರಿಗೂ ಹೀಗೆ ಸೆಲ್ಯೂಟ್ ಹೊಡೆಯುವ ಈ ವ್ಯಕ್ತಿ ಯಾರೆಂಬ ಕುತೂಹಲ ಮೂಡುವುದು ಸಹಜ. ಶಿವಮೊಗ್ಗ ವಕೀಲರ ಮಾನವೀಯತೆಯ ನಡೆಯಿಂದ ಬದುಕು ಕಂಡುಕೊಂಡ ಮಾನಸಿಕ ಅಸ್ವಸ್ಥನೊಬ್ಬನ ಕತೆ ಇಲ್ಲಿದೆ ಎಂದು ಅರಿವಾದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಜೊತೆಗೆ ವಕೀಲರ ನಡೆಗೆ ಹೃದಯ ತುಂಬಿ ಬರುತ್ತದೆ.
ಈತನ ಹೆಸರು ಮಂಜುನಾಥ ಆಚಾರಿ ಎಂದು. ಈತ ಶಿವಮೊಗ್ಗದ ಜನರಿಗೆ ಅಪರಿಚಿತನೇನಲ್ಲ. ಜನರ ದೃಷ್ಟಿಯಲ್ಲಿ ಈತ ಮಾನಸಿಕ ಅಸ್ವಸ್ಥ. ಕಂಡ ಕಂಡಲ್ಲಿ ನಿಂತು ಕೂಗುವುದು, ಕೈಯಲ್ಲಿ ಪೇಪರ್ ಪೆನ್ನು ಹಿಡಿದು ವಾಹನಗಳ ಸಂಖ್ಯೆ ಬರೆದುಕೊಳ್ಳುವುದು, ವಾಹನಗಳ ಸಂಚಾರದ ಟ್ರಾಫಿಕ್ ವ್ಯವಸ್ಥೆಗೆ ನಿಯುಕ್ತಿಗೊಂಡವನಂತೆ ವರ್ತಿಸುತ್ತಾ ಪೀಪಿ ಊದುವುದು ಮಾಡುವಾಗ ಕೆಲವೊಮ್ಮೆ ಗಾಬರಿಯೂ ಆಗುತ್ತಿತ್ತು. ಈತನೊಬ್ಬ ಮಾನಸಿಕ ಅಸ್ವಸ್ಥ ಎಂದು ಭಾವಿಸಿ ಸರಿದು ದೂರಕ್ಕೆ ಹೋದವರೇ ಜಾಸ್ತಿ.
ಹೆಗಲಲ್ಲಿ ಕಸ ತುಂಬಿದ ಚೀಲವೊಂದು ಸದಾ ಇರುತ್ತಿತ್ತು. ನಗರದ ಜನರಿಗೆ ಒಟ್ಟಾರೆ ಕಿರಿ ಕಿರಿ ಮಾಡುತ್ತಿದ್ದ ಈತನ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ಹೋಗಿದ್ದೂ ಇದೆ. ಆದರೆ ಇಂತಹ ವ್ಯಕ್ತಿಯನ್ನು ಹೀಗೆಯೇ ಬಿಡದೆ ಮಾನವೀಯತೆ ತೋರಿದರೆ ಬದಲಾವಣೆ ಸಾಧ್ಯ ಎಂಬುದನ್ನು ಕಂಡುಕೊಂಡ ಶಿವಮೊಗ್ಗ ವಕೀಲರು ಅದನ್ನು ಸಾಧಿಸಿ ತೋರಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿಯೂ ಈತನ ದಾಂಧಲೆ ಆಗಾಗ್ಗೆ ಇರುತ್ತಿತ್ತು. ಒಮ್ಮೆ ವಕೀಲರು ಈ ಮಂಜನಾಥ ಆಚಾರಿಯನ್ನು ಕರೆದು ತಮ್ಮ ವಕೀಲರ ಭವನದ ಎದುರು ಸೆಕ್ಯುರಿಟಿ ಗಾರ್ಡ್ ಆಗಿ ಇರುವಂತೆ ಸೂಚಿಸಿದ್ದಾರೆ. ಇವರ ಮಾತಿಗೆ ಬೆಲೆಕೊಟ್ಟು ಇಲ್ಲಿಗೆ ಬಂದು ನಿಂತಿದ್ದಾನೆ. ಬಳಿಕ ಕೆಲ ವಕೀಲರು ಸೇರಿ ಈತನಿಗೆ ಡ್ರೆಸ್ ಹೊಲಿಸಿಕೊಟ್ಟಿದ್ದಾರೆ. ಈಗ ದಿನವೂ ಅದೇ ಡ್ರೆಸ್‌ನಲ್ಲಿ ಕಾಣಿಸುವ ಆಚಾರಿ ಈಗ ಆತ ಶಿಸ್ತಿನ ಸಿಪಾಯಿ. ಬಂದವರೆಲ್ಲರಿಗೂ ಒಂದು ಸೆಲ್ಯೂಟ್ ಉಚಿತವಾಗಿ ನೀಡುತ್ತಾನೆ. ನಗು ಮುಖದಲ್ಲಿ ಸ್ವಾಗತಿಸುತ್ತಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಮ್ಮೆ ಅರೆ ಹುಚ್ಚನಂತೆ ವರ್ತಿಸುತ್ತಿದ್ದ ಈತ ಈಗ ಸ್ವಾವಲಂಬಿ. ವಕೀಲರು ಕೊಡುವ 10-20 ರುಪಾಯಿ ಈತನಿಗೆ ಆದಾಯದ ಮೂಲ. ಸಾಕಷ್ಟುಸಂಗ್ರಹವಾಗುತ್ತದೆ. ಈತನ ಚಲನವಲದಲ್ಲಿಯೂ ಸಾಕಷ್ಟುಬದಲಾವಣೆ ಕಾಣಿಸಿದೆ.
ಸೋಮವಾರ ಇದ್ದಕ್ಕಿದ್ದಂತೆ ವಕೀಲರ ಸಂಘದ ಕಾರ್ಯದರ್ಶಿಗಳ ಬಳಿ ಬಂದು ತನಗೆ ಒಂದು ದಿನದ ರಜೆ ಬೇಕೆಂದು ಕೇಳಿದ್ದಾನೆ. ಒಂದು ದಿನ ಯಾಕೋ ವಾರ ಪೂರ್ತಿ ತೆಗೆದುಕೋ ಎಂದರೆ, ಇಲ್ಲ ಒಂದೇ ದಿನ. ಬೊಮ್ಮನಕಟ್ಟೆಗಣಪತಿಗೆ ಹೋಗಿ ಬರುತ್ತೇನೆ ಸಾರ್ ಎನ್ನುವಾಗ ಈತನ ಕರ್ತವ್ಯ ನಿಷ್ಠತೆಯ ಬಗ್ಗೆ ವಕೀಲರು ಖುಷಿ ಪಟ್ಟಿದ್ದಾರೆ. ಎಲ್ಲರಂತೆ ಇದ್ದ ಈತನ ಕುಟುಂಬದಲ್ಲಿ ಉಂಟಾದ ಸಮಸ್ಯೆಯಿಂದ ಈತ ಹೀಗಾಗಿದ್ದಾನೆ.
ಯಾರೇ ವ್ಯಕ್ತಿಯಾಗಲೀ ಮಾನವೀಯತೆ ತೋರಿಸಿದರೆ ಆತ ಸಾಮಾನ್ಯ ಮನುಷ್ಯನಾಗುತ್ತಾನೆ ಎಂಬುದಕ್ಕೆ ಈತನೇ ಸಾಕ್ಷಿ. ಈಗ ಎಲ್ಲ ವಕೀಲರ ಜೊತೆ ಸ್ನೇಹದಿಂದ ಇದ್ದು, ಸ್ವಯಂ ಉದ್ಯೋಗಿಯೂ ಆಗಿದ್ದಾನೆ.
-ಕೆ. ಪಿ. ಶ್ರೀಪಾಲ್, ವಕೀಲರು, ಶಿವಮೊಗ್ಗ