ಶಿವಮೊಗ್ಗ, ರಾಣೇಬೆನ್ನೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್
ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಸುರಿದ ಮಹಾ ಮಳೆಗೆ ರಾಣೇಬೆನ್ನೂರು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ನಿಟ್ಟೂರು ಸಮೀಪದ ಮಡೋಡಿ ಸೇತುವೆಯ ಸುಮಾರು 60 ಮೀಟರ್ ದಂಡೆ ಕೊಚ್ಚಿ ಹೋಗಿದೆ. ಇದರಿಂದ ರಾಣೇಬೆನ್ನೂರು - ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಶಿವಮೊಗ್ಗ(ಆ.11): ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಸುರಿದ ಮಹಾ ಮಳೆಗೆ ರಾಣೇಬೆನ್ನೂರು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯ ನಿಟ್ಟೂರು ಸಮೀಪದ ಮಡೋಡಿ ಸೇತುವೆಯ ಸುಮಾರು 60 ಮೀಟರ್ ದಂಡೆ ಕೊಚ್ಚಿ ಹೋಗಿದೆ. ಇದರಿಂದ ರಾಣೇಬೆನ್ನೂರು - ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಪ್ರಮುಖ ಯಾತ್ರಾಸ್ಥಳವಾಗಿರುವ ಸಿಗಂದೂರು, ಕೊಲ್ಲೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರ ಹೋಬಳಿಯಲ್ಲಿ ಭಾರೀ ಮಳೆ ಸುರಿದ ಕಾರಣ ಚಕ್ರಾ ಡ್ಯಾಂ ತುಂಬಿದ್ದು ಲಿಂಗನಮಕ್ಕಿಗೆ ಹರಿಸಲಾಗುತ್ತಿದೆ. ಮಡೋಡಿ ಸೇತುವೆಯ ಕೆಳಭಾಗದಲ್ಲೇ ಈ ನೀರು ಹರಿಯುವ ಕಾರಣ ಹೆಚ್ಚಿನ ನೀರು ಬಂದಿದ್ದರಿಂದ ಸೇತುವೆಯ ದಂಡೆ ಕೊಚ್ಚಿ ಹೋಗಿದೆ. ಸೇತುವೆಯ ಕೆಳಭಾಗ ಕೊಚ್ಚಿ ಹೋಗಿದ್ದು ಮೇಲ್ಭಾಗದಲ್ಲಿ ಬಿರುಕು ಮೂಡಿದೆ.
ತ್ವರಿತ ಕ್ರಮಕ್ಕೆ ಆಗ್ರಹ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇತುವೆಯನ್ನು ಪರಿಶೀಲಿಸಿದರು. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿ, ಮಾತ್ರವಲ್ಲ ಯಾತ್ರಾ ಸ್ಥಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು ತ್ವರಿತ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ಬಂದಿರುವ ಮಣಿವಣ್ಣನ್ ಸಮರ್ಥ ಅಧಿಕಾರಿಯಾಗಿದ್ದು ಈ ಬಗ್ಗೆ ಕೂಡಲೇ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪರ್ಯಾಯ ಮಾರ್ಗ:
ಹೆದ್ದಾರಿ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಬಸ್ಸಿನ ಸಂಪರ್ಕದಲ್ಲೂ ವ್ಯತ್ಯಯವಾಗಿದೆ. ಆದರೆ ಸಂಪೇಕಟ್ಟೆಯಿಂದ ಕಟ್ಟಿನಹೊಳೆ ಮಾರ್ಗವಾಗಿ ನಿಟ್ಟೂರು ಸಮೀಪದ ಗೌರಿಕರೆ ಮೂಲಕ ಸಂಪರ್ಕ ಸಾಧಿಸಬಹುದು ಎಂದು ಹೇಳಿದರು. ಶಿಮುಲ್ ನಿರ್ದೇಶಕ ವಿದ್ಯಾಧರ್ ಮತನಾಡಿ, ಮಡೋಡಿ ಸೇತುವೆ ಕುಸಿತದ ಪರಿಣಾಮವಾಗಿ ನಿಟ್ಟೂರು ಮತ್ತು ಸಿಗಂದೂರಿಗೆ ನಂದಿನಿ ಹಾಲು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗಿದೆ. ಪರ್ಯಾಯ ಮಾರ್ಗದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಡ್ಯ: ಮನೆ, ಜಮೀನಿಗೆ ನುಗ್ಗಿದಳು ಹೇಮೆ
ಹೊಸನಗರ ಪಪಂ ಮಾಜಿ ಸದಸ್ಯೆ ಪದ್ಮಾವತಮ್ಮ ಮನೆ, ಉದ್ಯಮಿ ವಿನಾಯಕ ಶ್ರೇಷ್ಠಿ ಮನೆಯ ಗೋಡೆ ಕುಸಿತ, ಯಡೂರು ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್ ಕುಸಿತಗೊಂಡಿದೆ, ವಾರಂಬಳ್ಳಿ ನರಸಿಂಹ ಗೌಡರ ನಾಟಿ ಮಾಡಿದ ಗದ್ದೆಯು ಸಂಪೂರ್ಣ ಕೊಚ್ಚಿ ಹೋಗಿದೆ ಎಂದು ಪಪಂ ಸದಸ್ಯ ಹಾಲಗದ್ದೆ ಉಮೇಶ ತಿಳಿಸಿದ್ದಾರೆ. ವಿನಾಯಕ ಚಕ್ಕಾರು, ಪ್ರದೀಪ್ ಹಾಲಗದ್ದೆ, ಶ್ರೀಧರಶೆಟ್ಟಿ ಊರಿನ ಪ್ರಮುಖರು ಹಾಜರಿದ್ದರು.