ಮೆಗ್ಗಾನ್ ವೈದ್ಯರ ’ಖಾಸಗಿ ಕೆಲಸಕ್ಕೆ’ ಖಡಕ್ ಎಚ್ಚರಿಕೆ
ಮೆಗ್ಗಾನ್ ಆಸ್ಪತ್ರೆಯಲ್ಲಿನ ಈಗಿರುವ ವ್ಯವಸ್ಥೆ ಸುಧಾರಿಸಬೇಕಿದೆ. ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆ ಮಾದರಿಯಾಗಿಸಲು ಕೆಲಸ ಮಾಡಬೇಕು. ರೋಗಿಗಳಿಂದ ಯಾವುದೇ ರೀತಿಯಲ್ಲೂ ದೂರ ಕೇಳಿಬರಬಾರದು ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಜೂ. 14): ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದರು.
ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿನ ಈಗಿರುವ ವ್ಯವಸ್ಥೆ ಸುಧಾರಿಸಬೇಕಿದೆ. ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆ ಮಾದರಿಯಾಗಿಸಲು ಕೆಲಸ ಮಾಡಬೇಕು. ರೋಗಿಗಳಿಂದ ಯಾವುದೇ ರೀತಿಯಲ್ಲೂ ದೂರ ಕೇಳಿಬರಬಾರದು ಎಂದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಾಗಿ ಬಡ ರೋಗಿಗಳು ಬರುತ್ತಾರೆ. ಆದರೆ ಇಲ್ಲಿ ಚಿಕಿತ್ಸೆ ನೀಡದೆ ನಾನಾ ರೀತಿಯ ಸಬೂಬು ಹೇಳಿ ಖಾಸಗಿ ಆಸ್ಪತ್ರೆಗೆ ಕಳಿಸಲಾಗುತ್ತಿದೆ. ಹೀಗಾದರೆ ಬಡ ರೋಗಿಗಳ ಪಾಡೇನು ಎಂದು ಪ್ರಶ್ನಿಸಿದರು.
ಅನೇಕ ವೈದ್ಯರು ನಿಯಮ ಉಲ್ಲಂಘಿಘಿಸಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಇನ್ನು ಕೆಲವು ವೈದ್ಯರು ಕಿರಿಯ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿರುವ ಕುರಿತು ಮಾಹಿತಿ ಇದೆ. ಈ ರೀತಿ ದೂರು ಬಂದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರ್. ಪ್ರಸನ್ನಕುಮಾರ್, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಪಂ ಸಿಇಒ ವೈಶಾಲಿ, ಆಸ್ಪತ್ರೆ ಸಲಹಾ ಸಮಿತಿ ಸದಸ್ಯರಾದ ಡಾ. ವಾಣಿ ಕೋರಿ, ಡಾ. ಗೌತಮ್, ದಿವಾಕರ್ ಶೆಟ್ಟಿ, ಜಿಲ್ಲಾ ಸರ್ಜನ್ ಡಾ. ರಘುನಂದನ್ ಮತ್ತಿತರರಿದ್ದರು.