Asianet Suvarna News Asianet Suvarna News

ಗಣಪತಿ ಕೆರೆ ಸರ್ವೆ ವೀಕ್ಷಣೆಗೆ ಜನವೋ ಜನ

ಸಾಗರದ ಇತಿಹಾಸ ಪ್ರಸಿದ್ದ ಗಣಪತಿ ಕೆರೆ ಸರ್ವೆ ಕಾರ್ಯ ಆರಂಭವಾಗಿದೆ. ಶಾಸಕ ಹರತಾಳು ಹಾಲಪ್ಪ, ಸಚಿವ ಈಶ್ವರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸರ್ವೆ ಕಾರ್ಯ ನೋಡಲು ಕೆರೆಯ ಸುತ್ತ ಸಾಕಷ್ಟು ಜನ ನೆರೆದಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Huge no of people watches Ganapathi Lake Survey in Sagara Shivamogga
Author
Sagara, First Published May 28, 2020, 8:01 AM IST

ಸಾಗರ(ಮೇ.28): ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಬುಧವಾರ ಪಟ್ಟಣದ ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆ ಸರ್ವೆ ಆರಂಭಿಸಿತು. ಎರಡು ದಿನಗಳ ಕಾಲ ಈ ಸರ್ವೆ ಕಾರ್ಯ ನಡೆಯಲಿದ್ದು, ಸರ್ವೆ ವೀಕ್ಷಿಸಲು ಪಟ್ಟಣದ ಪ್ರಮುಖರು, ಸಾರ್ವಜನಿಕರು ಕೆರೆಯ ಮೇಲ್ಭಾಗದಲ್ಲಿ ಜಮಾವಣೆಗೊಂಡಿದ್ದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್‌ ಸರ್ವೆ ಅ​ಕಾರಿಗಳೊಂದಿಗೆ ಚರ್ಚೆ ನಡೆಸಿ, ಗಣಪತಿ ಕೆರೆ ಸರ್ವೆಯನ್ನು ಪಾರದರ್ಶಕವಾಗಿ ಮಾಡಬೇಕು ಎಂದು ಸಲಹೆ ನೀಡಿದರೆ, ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಗಣಪತಿ ಕೆರೆ ಸರ್ವೆಗಿಂತ ಮೊದಲು ಕೆರೆಯ ನಾಲ್ಕು ದಿಕ್ಕುಗಳಲ್ಲಿ ಬರುವ ಕೊತ್ವಾಲಕಟ್ಟೆ, ಕಂಬಳಿಕೊಪ್ಪ, ಚಂದ್ರಮಾವಿನಕೊಪ್ಪಲು ಗ್ರಾಮದ ಗಡಿಯನ್ನು ಗುರುತಿಸಿದರೆ ಕೆರೆಯ ಒಟ್ಟು ವಿಸ್ತೀರ್ಣ ಗೊತ್ತಾಗುತ್ತದೆ. ಮೊದಲು ಕೆರೆಯ ಸುತ್ತಲಿನ ಪ್ರದೇಶದ ಗಡಿ ಗುರುತಿಸುವಂತೆ ಸಲಹೆ ನೀಡಿದರು.

ಪತ್ರಕರ್ತ ಎಚ್‌.ಬಿ. ರಾಘವೇಂದ್ರ, ಗಣಪತಿ ಕೆರೆ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಸರ್ವೆ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸರ್ವೆ ಮಾಡುವ ಸಂದರ್ಭದಲ್ಲಿ ಕೆರೆಯ ಹಿಂದಿನ ವಿಸ್ತೀರ್ಣವನ್ನು ಗಮನದಲ್ಲಿ ಇರಿಸಿಕೊಂಡು ಅದರ ದಾಖಲೆ ಅನ್ವಯ ಸರ್ವೇ ನಡೆಸಿ ಎಂದು ಹೇಳಿದರು.

ಸಂಘ ಪರಿವಾರದ ಪ್ರಮುಖ ಅ.ಪು. ನಾರಾಯಣಪ್ಪ, 1905ರಲ್ಲಿ ಮೊದಲ ಬಾರಿಗೆ ಗಣಪತಿ ಕೆರೆ ಸರ್ವೆ ನಡೆದಿತ್ತು. ನಂತರ ಅನೇಕ ಸರ್ವೆಗಳು ನಡೆದಿದ್ದರೂ ಕೆರೆ ಗಡಿ ಗುರುತಿಸಲು ವಿಫಲವಾಗಿದೆ. ಈ ಬಾರಿಯ ಸರ್ವೆ ಜನರು ಒಪ್ಪುವಂತೆ ಆಗಬೇಕು. ಒತ್ತುವರಿ ಯಾರೇ ಮಾಡಿಕೊಂಡಿರಲಿ. ಕೆರೆಯ ಜಾಗವನ್ನು ಸರಿಯಾಗಿ ಗುರುತಿಸಿಕೊಡಿ ಎಂದು ಒತ್ತಾಯಿಸಿದರು.

ಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ. ಹೆಗಡೆ ಮಾತನಾಡಿ, 1857 ನೇ ಇಸವಿಯ ಇಡೀ ತಾಲೂಕಿನ ಟ್ಯಾಂಕ್‌ ರಿಜಿಸ್ಟರ್‌ ಸೇರಿದಂತೆ 2013ರಲ್ಲಿ ನಡೆದ ಕೆರೆಯ ಸರ್ವೆ ವರದಿ ಕೂಡ ನಮ್ಮ ಬಳಿ ಇದೆ. ಟ್ಯಾಂಕ್‌ ರಿಜಿಸ್ಟರ್‌ನಲ್ಲಿ ಗಣಪತಿ ಕೆರೆ ಒಟ್ಟು 28 ಎಕರೆ ವಿಸ್ತೀರ್ಣವಿತ್ತು ಎಂಬ ಉಲ್ಲೇಖವಿದೆ. ಅಂದಿನಿಂದ ಇಂದಿನವರೆಗೂ ಕೆರೆಯನ್ನು ನಿರಂತರವಾಗಿ ಒತ್ತುವರಿ ಮಾಡಲಾಗಿದೆ. ಸರ್ವೆಯನ್ನು ವೈಜ್ಞಾನಿಕವಾಗಿ ಮಾಡಿದಾಗ ಮಾತ್ರ ಒತ್ತುವರಿದಾರರನ್ನು ಗುರುತಿಸಲು ಸಾಧ್ಯ. ಜಿಪಿಎಸ್‌ ರೀಡಿಂಗ್‌ ಮೂಲಕ ಸರ್ವೆ ನಡೆಸುವುದು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದರು.

ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಸುಜಿತ್‌ಕುಮಾರ್‌, ತಹಸೀಲ್ದಾರ್‌ ಚಂದ್ರಶೇಖರ್‌ ನಾಯ್‌್ಕ, ಪೌರಾಯುಕ್ತ ಎಚ್‌.ಕೆ.ನಾಗಪ್ಪ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios