Asianet Suvarna News Asianet Suvarna News

ಎಸ್‌ಪಿ ಕಚೇರಿ ಸೀಲ್‌ಡೌನ್‌ ಆಗಿಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ

ಕೊರೋನಾ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯನ್ನೇ ಸೀಲ್‌ಡೌನ್ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ವಿದ್ಯುನ್ಮಾನ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

Shivamogga DC KB Shiva Kumar Clarifies Regarding SP Office Sealdown
Author
Shivamogga, First Published May 21, 2020, 9:07 AM IST

ಶಿವಮೊಗ್ಗ(ಮೇ.21):  ಕೊರೋನಾ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎಸ್ಪಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿಲ್ಲ. ಸಾಮಾಜಿಕ ಜಾಲತಾಣ ಮತ್ತು ಕೆಲ ವಿದ್ಯುನ್ಮಾನ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಪ್ರಕರಣವೊಂದರ ಸಂಬಂಧ ಹೆಚ್ಚುವರಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಮೂರು ಮಂದಿ ಪೊಲೀಸ್‌ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಹಲವಾರು ಪೊಲೀಸ್‌ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‌ ಆಗುವುದಾಗಿ ತಿಳಿಸಿದ್ದಾರೆ. ಆದರೆ ಎಸ್‌ಪಿ ಕಚೇರಿಯನ್ನೇ ಸೀಲ್‌ಡೌನ್‌ ಮಾಡಲಾಗಿದೆ, ಎಲ್ಲ ಪೊಲೀಸ್‌ ಅಧಿಕಾರಿಗಳೂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂಬೆಲ್ಲ ಸುದ್ದಿಗಳು ಸುಳ್ಳು ಎಂದು ಹೇಳಿದರು.

ಆದರೂ ಮುಂಜಾಗರೂಕತಾ ಕ್ರಮವಾಗಿ ಈಗಾಗಲೇ 11ಮಂದಿ ಪೊಲೀಸ್‌ ಅಧಿಕಾರಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಎಲ್ಲವೂ ನೆಗೆಟಿವ್‌ ಬಂದಿದೆ. ವಿಶೇಷ ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಹೆಚ್ಚುವರಿ ಕರ್ತವ್ಯಕ್ಕಾಗಿ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಾಮಾನ್ಯವಾಗಿದ್ದು, ಆದರಂತೆ ಇಲ್ಲಿಗೂ ಕಳುಹಿಸಿಕೊಡಲಾಗಿದೆ. ಎಸ್‌ಪಿ ವರ್ಗಾವಣೆ ಇತ್ಯಾದಿ ಮಾಹಿತಿಗಳು ಸರಿಯಲ್ಲ. ಯಾವುದೇ ಮಾಧ್ಯಮಗಳಾದರೂ ಜಿಲ್ಲಾಡಳಿತದ ಜೊತೆ ಮಾತನಾಡಿ ಆ ಬಳಿಕ ಸುದ್ದಿ ಪ್ರಕಟಿಸುವುದು ಒಳಿತು ಎಂದು ಹೇಳಿದರು.

ಯುವತಿಗೆ ಕೊರೋನಾ: ತರಲಘಟ್ಟಗ್ರಾಮ ಸೀಲ್‌ಡೌನ್‌

ಹೆಚ್ಚು ಜನ ಸೇರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ನಿಗದಿತ ಅವಧಿಯಲ್ಲಿ ಕ್ರಿಮಿನಾಶಕ ಸಿಂಪಡಣೆಯ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆ ಮಾಡಲಾಗುತ್ತದೆ. ಅದರಂತೆ ಎಸ್‌. ಪಿ. ಕಚೇರಿಯನ್ನು ಸ್ವಚ್ಛ ಮಾಡಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಪರೀಕ್ಷೆಯಲ್ಲಿ ಹೆಚ್ಚಳ:

ಜಿಲ್ಲೆಯಲ್ಲಿ ಇದುವರೆಗೆ 5172 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರ ಪೈಕಿ 4828 ಫಲಿತಾಂಶ ಬಂದಿದ್ದು, 320 ಬರಬೇಕಿದೆ. 4804 ನೆಗೆಟಿವ್‌ ಬಂದಿದೆ. ಹೊರ ರಾಜ್ಯಗಳಿಂದ ಆಗಮಿಸಿದ್ದ 1158 ಜನರನ್ನು ಕ್ವಾರೆಂಟೈನ್‌ ಮಾಡಿ ಪರೀಕ್ಷೆ ನಡೆಸಲಾಗಿದೆ. 943 ಫಲಿತಾಂಶ ಬಂದಿದೆ. ಪ್ರಸ್ತುತ ಜಿಲ್ಲೆಗೆ ಪ್ರತಿದಿನ 50 ರಿಂದ 70 ಮಂದಿ ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ ಎಂದರು.

ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 329 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಂಡು ಬಂದಿದ್ದ ಪಾಸಿಟಿವ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎಲ್ಲರ ಗಂಟಲ ದ್ರವ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಂಪರ್ಕ ಹೊಂದಿದ್ದವರ ತಪಾಸಣೆ ನಡೆಸಲಾಗುವುದು ಎಂದರು.

ಕ್ವಾರೆಂಟೈನ್‌ ಹೆಲ್ಪ್‌ಲೈನ್‌:

ಜಿಲ್ಲೆಯಲ್ಲಿ ಒಟ್ಟು 52 ಕ್ವಾರೆಂಟೈನ್‌ ಕೇಂದ್ರಗಳಿದ್ದು, ನಾಲ್ಕು ಕೇಂದ್ರಗಳಿಗೆ ಒಬ್ಬರಂತೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕ್ವಾರೆಂಟೈನ್‌ ಕೇಂದ್ರಗಳಲ್ಲಿರುವವರು ಅಹವಾಲು ಸಲ್ಲಿಸಲು ದಿನದ 24 ಗಂಟೆ ಕೆಲಸ ಮಾಡುವ ಕಂಟ್ರೋಲ್‌ ರೂಂ ಆರಂಭಿಸಲಾಗಿದ್ದು, 08182-220082 ಸಂಖ್ಯೆಗೆ ಕರೆ ಮಾಡಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ಪ್ರಕರಣ ದಾಖಲು:

ಕೋವಿಡ್‌ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪಾಸಿಟಿವ್‌ ಬಂದಿರುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಕರ್ತವ್ಯದಲ್ಲಿದ್ದ ತಂಡವನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ, ಶೇರ್‌ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಅಂತರ ಜಿಲ್ಲಾ ಪಯಣಕ್ಕೆ ಪಾಸ್‌ ಬೇಡ:

ರಾಜ್ಯದಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತರ ಜಿಲ್ಲಾ ಪ್ರಯಾಣಕ್ಕೆ ಯಾವುದೇ ಪಾಸ್‌ ಅಗತ್ಯವಿಲ್ಲ. ಖಾಸಗಿ ವಾಹನಗಳಲ್ಲಿ ಸಹ ಜನರು ಮಾರ್ಗಸೂಚಿ ಪ್ರಕಾರ ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
 

Follow Us:
Download App:
  • android
  • ios