ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಆನೆ ಸೋಮಣ್ಣ ದಿಢೀರ್ ರೊಚ್ಚಿಗೆದ್ದು ಓಡಲು ಯುವಕನೊಬ್ಬ ಆನೆಯ ಹಿಂಭಾಗಕ್ಕೆ ಮುಟ್ಟಿದ್ದೇ ಕಾರಣ ಎಂಬುದು ತಿಳಿದುಬಂದಿದೆ. ಆನೆಗಳಿಗೆ ಹಿಂಭಾಗ ಕಾಣಿಸದ ಕಾರಣ, ಹಠಾತ್ ಸ್ಪರ್ಶದಿಂದ ಬೆಚ್ಚಿಬಿದ್ದು ಈ ಅನಾಹುತ ಸೃಷ್ಟಿಸಿದೆ. ಘಟನೆ ಬಳಿಕ ಆನೆಗಳನ್ನು ಸಕ್ರೆಬೈಲು ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಎಲ್ಲರ ಕಣ್ಣಾಗಿದ್ದ ಅಂಬಾರಿ ಆನೆ 'ಸೋಮಣ್ಣ' ಇದ್ದಕ್ಕಿದ್ದಂತೆ ಭಯಗೊಂಡು, ರೊಚ್ಚಿಗೆದ್ದು ಹಿಂತಿರುಗಿ ಓಡಿದ ದುರ್ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿತ್ತು. ಶಿವಪ್ಪ ನಾಯಕನ ಅರಮನೆಯ ಆವರಣದಿಂದ ಸುಮಾರು 650 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ ಸಾಗುತ್ತಿದ್ದ ಸೋಮಣ್ಣ, ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ಉಲ್ಟಾ ತಿರುಗಿ ಓಡಲು ಆರಂಭಿಸಿದ. ಈ ಘಟನೆಯಿಂದಾಗಿ ಬೆಳ್ಳಿ ಅಂಬಾರಿ ನೆಲಕ್ಕೆ ಬಿದ್ದು, ಮೆರವಣಿಗೆಯಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡುವಂತಾಯಿತು.
ಆರಂಭದಲ್ಲಿ ಪಟಾಕಿ ಶಬ್ದ ಹಾಗೂ ಡೋಲುಗಳ ಅತಿಯಾದ ಗದ್ದಲವೇ ಆನೆ ಗಾಬರಿಗೊಳ್ಳಲು ಕಾರಣವೆಂದು ಭಾವಿಸಲಾಗಿತ್ತು. ಆದರೆ, ಆನೆಯ ಈ ದಿಢೀರ್ ವರ್ತನೆಯ ಹಿಂದೆ ಒಬ್ಬ ವ್ಯಕ್ತಿಯ ಸಣ್ಣ ಅಚಾತುರ್ಯ ಮತ್ತು ವೈಜ್ಞಾನಿಕ ಕಾರಣವಿರುವುದು ಈಗ ಬೆಳಕಿಗೆ ಬಂದಿದೆ.
ಹಿಂಭಾಗದ ಸ್ಪರ್ಶವೇ ಪ್ರಚೋದನೆ!
ಮೆರವಣಿಗೆಯಲ್ಲಿ ಸ್ವಯಂಸೇವಕನಾಗಿ ಭಾಗವಹಿಸಿದ್ದ ಯುವಕನೊಬ್ಬ ಮಾಡಿದ ಸಣ್ಣ ತಪ್ಪು ಈ ಅನಾಹುತಕ್ಕೆ ಮುನ್ನುಡಿ ಬರೆಯಿತು. ಮೆರವಣಿಗೆ ಸಾಗುತ್ತಿದ್ದಾಗ ಈ ಯುವಕ ಆನೆಯ ಹಿಂಭಾಗದಿಂದ ನುಗ್ಗಿ, ಸೋಮಣ್ಣನ ಹಿಂಭಾಗಕ್ಕೆ ‘ಪಟ್’ ಎಂದು ತಟ್ಟಿದ್ದಾನೆ. ಈ ಹಠಾತ್ ಸ್ಪರ್ಶವಾಗುತ್ತಿದ್ದಂತೆಯೇ ಆನೆ ತಕ್ಷಣವೇ ಹಿಂತಿರುಗಿ ಓಡಲು ಶುರುಮಾಡಿದೆ. ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಗುವಷ್ಟರಲ್ಲಿ ಅನಾಹುತ ನಡೆದುಹೋಗಿತ್ತು.
ಆನೆ ಹಿಂದಿನಿಂದ ಮುಟ್ಟಿದರೆ ಯಾಕೆ ರೊಚ್ಚಿಗೇಳುತ್ತದೆ?
ಆನೆಗಳ ದೃಷ್ಟಿ ಕೋನದಲ್ಲಿ ಅವುಗಳ ನೇರ ಹಿಂಭಾಗವು 'ಬ್ಲೈಂಡ್ ಸ್ಪಾಟ್' ಆಗಿದೆ. ಅಂದರೆ ಆನೆಗೆ ತನ್ನ ಮುಂಭಾಗ ಹಾಗೂ ಎರಡೂ ಬದಿಗಳು ಕಾಣಿಸುತ್ತವೆಯೇ ಹೊರತು, ತನ್ನ ನೇರ ಹಿಂಭಾಗದಲ್ಲಿ ಏನಿದೆ ಎಂಬುದು ಕಾಣಿಸುವುದಿಲ್ಲ. ಆನೆಗೆ ಹಿಂಭಾಗ ಕಾಣಲ್ಲ. ಹಠಾತ್ ಯಾರೋ ಹಿಂದಿನಿಂದ ಮುಟ್ಟಿದರೆ, ಅದನ್ನು ಆನೆ ದಾಳಿ ಅಥವಾ ಬೆದರಿಕೆ ಅಂತಲೇ ಭಾವಿಸುತ್ತೆ, ತಕ್ಷಣ ಗಲಿಬಿಲಿಯಾಗುತ್ತೆ. ಹಿಂದಿನಿಂದ ಬೆಚ್ಚಿ ಬಿದ್ದಾಗ ಆನೆ ಮುಂದೆ ಓಡಲ್ಲ, ತಕ್ಷಣ ತಿರುಗಿ ಬೆದರಿಕೆ ಏನು ಅಂತ ನೋಡುತ್ತೆ. ತಿರುಗಿದಾಗ ಜನರ ಕೂಗಾಟ, ಗದ್ದಲ ಕಂಡು ಅದರ ಪ್ಯಾನಿಕ್ ಇನ್ನೂ ಹೆಚ್ಚಾಗಿ ಕುರುಡನಂತೆ ಓಡಲು ದಿಕ್ಕಾಪಾಲಾಗಿ ಓಡಲು ಶುರು ಮಾಡುತ್ತೆ, ದಾರಿಯಲ್ಲಿ ಸಿಗುವುದನ್ನೆಲ್ಲಾ ತುಳಿದು ಹಾಕುತ್ತೆ.
ದಾಳಿ ಎಂಬ ಭ್ರಮೆ:
ಈಗಾಗಲೇ ಡೋಲುಗಳ ಸದ್ದು, ಪಟಾಕಿಗಳ ಆರ್ಭಟ ಹಾಗೂ ಲಕ್ಷಾಂತರ ಜನರ ಗದ್ದಲದಿಂದ ಆನೆ ತೀವ್ರ ಮಾನಸಿಕ ಒತ್ತಡದಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಾಣಿಸದ ಹಿಂಭಾಗದಿಂದ ಯಾರೋ ಹಠಾತ್ ಸ್ಪರ್ಶಿಸಿದಾಗ, ಯಾರೋ ತನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬ ಭಯ ಆನೆಯಲ್ಲಿ ಹುಟ್ಟುತ್ತದೆ.
ಸ್ವಯಂ ರಕ್ಷಣೆ ಮತ್ತು ಪ್ಯಾನಿಕ್:
ಅಪರಿಚಿತ ಸ್ಪರ್ಶವಾದ ತಕ್ಷಣ ಆನೆಯಲ್ಲಿ ‘ಹೋರಾಡು ಇಲ್ಲವೇ ಓಡು’ ಎಂಬ ಸಹಜ ಪ್ರವೃತ್ತಿ ಜಾಗೃತಗೊಳ್ಳುತ್ತದೆ. ತಕ್ಷಣವೇ ಹಿಂತಿರುಗಿ ನೋಡುವ ಪ್ರಯತ್ನದಲ್ಲಿ ಆನೆ ಬಲವಾಗಿ ತಿರುಗುತ್ತದೆ. ಹೀಗೆ ತಿರುಗಿದಾಗ ಎದುರು ಕಾಣುವ ಜನರ ಕೂಗಾಟ ಮತ್ತು ಗೊಂದಲವನ್ನು ನೋಡಿ ಮತ್ತಷ್ಟು ಗಾಬರಿಗೊಂಡು, ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ತುಳಿಯುತ್ತ ಕಣ್ಣುಮುಚ್ಚಿ ಓಡಲು ಪ್ರಾರಂಭಿಸುತ್ತದೆ.
ಸಕ್ರೆಬೈಲು ಬಿಡಾರಕ್ಕೆ ಮರಳಿದ ಆನೆಗಳು
ಶಿವಮೊಗ್ಗ ದಸರಾದ ಜಂಬೂಸವಾರಿ ವೇಳೆ ಅಂಬಾರಿ ಹೊತ್ತು ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ ದುರ್ಘಟನೆ ಬಳಿಕ ಸೋಮಣ್ಣ ಆನೆ ನಿಯಂತ್ರಣಕ್ಕೆ ಬಂದ ಹಿನ್ನೆಲೆ ರಾತ್ರಿಯೇ ಆನೆಗಳನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ.
ಮುಂಜಾಗೃತ ಕ್ರಮವಾಗಿ ಶಿವಮೊಗ್ಗ ನಗರದ ವಾಸವಿ ಶಾಲೆ ಬಳಿ ನಿರ್ಮಿಸಿರುವ ರ್ಯಾಂಪ್ ಸಹಾಯದಿಂದ ಲಾರಿಗೆ ಆನೆಗಳನ್ನು ಹತ್ತಿಸುತ್ತಿಸಿದ ಬಿಡಾರದ ಸಿಬ್ಬಂದಿ ಮೂರು ಪ್ರತ್ಯೇಕ ಲಾರಿಯಲ್ಲಿ ಸೋಮಣ್ಣ ಹಾಗೂ ಬಹದ್ದೂರ್ ಆನೆಯ ಕಾಲಿಗೆ ಚೈನ್ ಹಾಕಿಯೇ ಅರಣ್ಯಾಧಿಕಾರಿಗಳು ಶಿಫ್ಟ್ ಮಾಡಿದ್ದಾರೆ.
ಶಿವಮೊಗ್ಗ ದಸರಾದ ಜಂಬೂ ಸವಾರಿ ವೇಳೆ ಭಯದಿಂದ ದಿಕ್ಕಾಪಾಲಾಗಿ ಓಡಿದ್ದ ಸೋಮಣ್ಣ ಆನೆಯ ಅಬ್ಬರಕ್ಕೆ 2 ಕಾರುಗಳ ಜೊತೆಗೆ ಬೈಕ್ ಗೂ ಹಾನಿಯಾಗಿದೆ. ಶಿವಮೊಗ್ಗ ನಗರದ ಕೋಟೆ ರಸ್ತೆಯ ಮನೆಯೊಂದರ ಹೆಂಚು ಸಹ ಪುಡಿ ಪುಡಿಯಾಗಿದೆ.


