Asianet Suvarna News Asianet Suvarna News

ಒಂದು ರುಪಾಯಿ ಕೊಟ್ಟು ವೋಟ್ ಹಾಕಿ..!

ನಗರದ ಬಸವನಗುಡಿ ವಾರ್ಡ್ ಸಂಖ್ಯೆ 11ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಮೊಗ್ಗ ನಂದನ್ ಅವರಿಗೆ ಜೆಡಿಎಸ್ ಬೆಂಬಲ ನೀಡಿದೆ. ಕೆಲವೇ ಮಂದಿಯನ್ನು ಜೊತೆಗಿಟ್ಟುಕೊಂಡಿರುವ ಅಭ್ಯರ್ಥಿ ನಂದನ್ ಪ್ರತಿ ಮನೆಗೆ ತೆರಳಿ ಒಂದು ರು. ಬೇಡುತ್ತಾರೆ. ಬಳಿಕ ಮತ ನೀಡುವಂತೆ ವಿನಂತಿಸುತ್ತಾರೆ. ಇವರು ಹೋದಲ್ಲೆಲ್ಲ ಬಹುತೇಕ ಮತದಾರರು ಒಂದು ರು. ನೀಡಿ ನಂದನ್ ಅವರನ್ನು ಹರಸಿದ್ದಾರೆ.

Shivamogga City Corporation elections vote with donating one rupee
Author
Shivamogga, First Published Aug 29, 2018, 6:25 PM IST

ಶಿವಮೊಗ್ಗ[ಆ.29]: ಚುನಾವಣೆಯಲ್ಲಿ ಮತ ಹಾಕುವಂತೆ ಹಣದ ಆಮೀಷ ಒಡ್ಡುವುದು ಸಹಜ. ಆದರೆ ಇಲ್ಲೊಬ್ಬ ಅಭ್ಯರ್ಥಿ ಪ್ರತಿ ಮನೆ ಮನೆಗೆ ತೆರಳಿ ಮತದ ಜೊತೆ ಒಂದು ರು. ಹಣ ಪಡೆದು ತಮಗೇ ಮತ ಹಾಕುವಂತೆ ವಿನಂತಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ಮೂಲಕ ಮತದಾರರಿಗೆ ಮತದಾನದ ಮಹತ್ವ ಸಾರಲು ಮುಂದಾಗಿದ್ದಾರೆ.
ಈ ರೀತಿ ವಿನೂತನ ರೀತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಪಕ್ಷೇತರ ಅಭ್ಯರ್ಥಿ ಶಿವಮೊಗ್ಗ ನಂದನ್. ಪತ್ರಿಕಾ ಛಾಯಾಗ್ರಾಹಕರೂ ಆಗಿರುವ ನಂದನ್ ಪರಿಸರ ಹೋರಾಟಗಾರರು ಹೌದು. ಎಲ್ಲಿಯೇ ಮರ ಕಡಿಯುವ ಸದ್ದು ಕೇಳಿದರೆ ನಂದನ್ ಮತ್ತವರ ಗೆಳೆಯರ ತಂಡ ಅಲ್ಲಿ ಹಾಜರಿರುತ್ತದೆ. ಇತ್ತೀಚೆಗೆ ನಗರದೊಳಗೆ ಹಾದುಹೋಗುವ ಬಿ.ಎಚ್.ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಮುಂದಾದಾಗ ಅದನ್ನು ಪ್ರತಿಭಟಿಸಿ, ಕೊನೆಗೆ ಆಮರವನ್ನು ಜೀವಂತವಾಗಿಯೇ ಬೇರೆಡೆ ಸಾಗಿಸಿ ನೆಡುವ ಪ್ರಯತ್ನವನ್ನು ನಂದನ್ ಅವರ ನೇತೃತ್ವದ ತಂಡ ಮಾಡಿತ್ತು.

ನಗರದ ಬಸವನಗುಡಿ ವಾರ್ಡ್ ಸಂಖ್ಯೆ 11ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಮೊಗ್ಗ ನಂದನ್ ಅವರಿಗೆ ಜೆಡಿಎಸ್ ಬೆಂಬಲ ನೀಡಿದೆ. ಕೆಲವೇ ಮಂದಿಯನ್ನು ಜೊತೆಗಿಟ್ಟುಕೊಂಡಿರುವ ಅಭ್ಯರ್ಥಿ ನಂದನ್ ಪ್ರತಿ ಮನೆಗೆ ತೆರಳಿ ಒಂದು ರು. ಬೇಡುತ್ತಾರೆ. ಬಳಿಕ ಮತ ನೀಡುವಂತೆ ವಿನಂತಿಸುತ್ತಾರೆ. ಇವರು ಹೋದಲ್ಲೆಲ್ಲ ಬಹುತೇಕ ಮತದಾರರು ಒಂದು ರು. ನೀಡಿ ನಂದನ್ ಅವರನ್ನು ಹರಸಿದ್ದಾರೆ.
ಈ ರೀತಿ ಒಂದು ರು. ಪಡೆಯುವುದರಿಂದ ಮತದಾರರಿಗೂ ನನಗೂ ಒಂದು ಬಾಂಧವ್ಯ ಬೆಳೆಯುತ್ತದೆ. ಅವರು ನೀಡಿದ ಒಂದು ರು. ಸದ್ವಿನಿಯೋಗವಾಗಬೇಕು ಎಂಬ ಮನಸ್ಸು ಅವರಲ್ಲಿ ಮೂಡುತ್ತದೆ. ಈ ಹಣ ಸದ್ವಿನಿಯೋಗ ವಾಗಬೇಕಾದರೆ ನಾನು ಗೆಲ್ಲಬೇಕು. ಇದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಹಣದ ಖರ್ಚಿಲ್ಲದೆ ಚುನಾವಣೆ ನಡೆಸುವ ನನಗೆ ಮುಂದೆಯೂ ಹಣದ ಅವಶ್ಯಕತೆ ಇಲ್ಲ. ಹೀಗಾಗಿ, ಪ್ರಾಮಾಣಿಕತೆಯಿಂದ ಕೆಲಸಮಾಡಲು ಸಾಧ್ಯವಾಗುತ್ತದೆ. ಇದನ್ನೇ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಎನ್ನುತ್ತಾರೆ ನಂದನ್.

ಈ ರೀತಿ ಸಂಗ್ರಹವಾದ ಹಣವನ್ನು ಪ್ರಚಾರಕ್ಕೂ ಬಳಸುವುದಿಲ್ಲ. ಚುನಾವಣೆ ಪ್ರಚಾರದ ಬಳಿಕ ಈ ಹಣವನ್ನು ಈ ವಾರ್ಡಿನ ಅಭಿವೃದ್ಧಿಗೇ ಬಳಸುತ್ತೇನೆ. ಕೆಲವರು ಹೆಚ್ಚು ಹಣ ನೀಡಲು ಮುಂದೆ ಬಂದಿದ್ದಾರೆ. ಬೇಡ ಒಂದು ರು. ಮಾತ್ರ ಸಾಕು ಎಂದಿದ್ದೇನೆ ಎನ್ನುತ್ತಾರೆ. ನಮ್ಮ ಜೊತೆ ನೂರಾರು ಕಾರ್ಯಕರ್ತರಿಲ್ಲ. ಕೇವಲ ಮತದಾರರಿದ್ದಾರೆ. ಹೀಗಾಗಿ, ಚುನಾವಣಾ ಪ್ರಚಾರಕ್ಕೆ ಹೆಚ್ಚು ಖರ್ಚಿಲ್ಲ. ಏಳೆಂಟು ಮಂದಿ ಪ್ರಚಾರ ಮಾಡುತ್ತಿದ್ದು, ಮಧ್ಯಾಹ್ನ ಯಾರಾದರೂ ಒಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಮಧ್ಯ ಕಾಫಿ, ಇತ್ಯಾದಿಗೆ ಹೋದಾಗ ನಮ್ಮ ತಂಡದ ಯಾರಾದರೊಬ್ಬರು ಹಣ ನೀಡುತ್ತಾರೆ. ಹೀಗಾಗಿ, ನನಗೆ ಇದುವರೆಗೆ ಖರ್ಚಾಗಿರುವುದು ಕೇವಲ ಐದಾರು ಸಾವಿರ ರು. ಮಾತ್ರ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಗೆ 3ಲಕ್ಷ ರು. ನಿಗದಿಗೊಳಿಸಿದ್ದರೂ ನನಗೆ ಅದು ಅನ್ವಯವಾಗುವುದೇ ಇಲ್ಲ ಎನ್ನುತ್ತಾರೆ. ಒಟ್ಟಾರೆ ವಿಭಿನ್ನ ರೀತಿಯಿಂದ ಚುನಾವಣಾ ಪ್ರಚಾರ ನಡೆಸುತ್ತಾ ನಂದನ್ ಅವರು ಬಸವನಗುಡಿ ವಾರ್ಡ್‌ನಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ.

Follow Us:
Download App:
  • android
  • ios