ಸಿದ್ದರಾಮಯ್ಯ ಸರ್ಕಾರ ರೈತರಿಗೆ ಮರಣ ಶಾಸನ ಬರೆಯುತ್ತಿದೆ: ಬಿ.ವೈ. ರಾಘವೇಂದ್ರ
ಬೇರೆಯವರ ಮನೆಯ ಒಲೆಯಲ್ಲಿ ಕೈಕಾಯಿಸಿಕೊಳ್ಳಬೇಡಿ. ನಿಮ್ಮದೇ ಸರ್ಕಾರ, ಅಧಿಕಾರ ಇದ್ದಾಗ ಯೋಜನೆಗಳನ್ನು ಜಾರಿಗೊಳಿಸದೆ, ಬಿಜೆಪಿ ಸರ್ಕಾರದ ಯೋಜನೆಗಳನ್ನು ನಾವು ಜಾರಿಗೊಳಿಸಿದ್ದು ಎಂದು ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಕುಟುಕಿದ ಸಂಸದ ಬಿ.ವೈ. ರಾಘವೇಂದ್ರ
ಶಿಕಾರಿಪುರ(ನ.10): ಕೆಲವರು ತಮ್ಮ ಪಾದಯಾತ್ರೆಯಿಂದಾಗಿಯೇ ತಾಲೂಕಿನ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು ಎಂದು ಹೇಳುತ್ತಿದ್ದಾರೆ. ಈ ಹಿಂದೆ ಇವರದೇ ಸರ್ಕಾರ ಇದ್ದು, ಇವರ ತಂದೆಯೇ ಮುಖ್ಯಮಂತ್ರಿ ಆಗಿದ್ದರು. ಲೋಕಸಭಾ ಸದಸ್ಯರೂ ಆಗಿದ್ದರು, ಆದರೂ ಏಕೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪರನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ ಅವರು ತಾಲೂಕಿನ ಈಸೂರು, ಉಡುಗಣಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಅಭಾವದಿಂದ ಹಾನಿಗೀಡಾದ ಫಸಲಿನ ಬಗ್ಗೆ ಅಧ್ಯಯನ ನಡೆಸಿ, ನಂತರದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ದಿಢೀರ್ ವರ್ಗಾವಣೆ: ಪ್ರಭಾವಿ ಸಚಿವರೊಬ್ಬರ ಒತ್ತಡವಿದೆಯಾ?
ಬೇರೆಯವರ ಮನೆಯ ಒಲೆಯಲ್ಲಿ ಕೈಕಾಯಿಸಿಕೊಳ್ಳಬೇಡಿ. ನಿಮ್ಮದೇ ಸರ್ಕಾರ, ಅಧಿಕಾರ ಇದ್ದಾಗ ಯೋಜನೆಗಳನ್ನು ಜಾರಿಗೊಳಿಸದೆ, ಬಿಜೆಪಿ ಸರ್ಕಾರದ ಯೋಜನೆಗಳನ್ನು ನಾವು ಜಾರಿಗೊಳಿಸಿದ್ದು ಎಂದು ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಕುಟುಕಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರೈತರಿಗೆ ಮರಣ ಶಾಸನವನ್ನು ಬರೆಯುತ್ತಿದೆ. 50 ಮೀಟರ್ ಅಂತರದಲ್ಲಿರುವ ಟಿ.ಸಿ.ಗಳಿಗೆ ವಿದ್ಯುತ್ ಸೌಕರ್ಯವನ್ನು ಕೊಡುತ್ತೇವೆ, ದೂರದ ಕೊಳವೆ ಬಾವಿಗಳಿಗೆ ಸೋಲಾರ್ ಸಿಸ್ಟಮ್ ಅಳವಡಿಸಿಕೊಳ್ಳಬೇಕೆಂದು ಕಾನೂನನ್ನು ಜಾರಿಗೆ ತಂದಿದ್ದು, ಇದನ್ನು ಕೂಡಲೇ ಸರ್ಕಾರವು ಹಿಂದಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ ಪ್ರತಿ ತಾಲೂಕಿನಲ್ಲೂ ಬಿಜೆಪಿ ನೇತೃತ್ವದಲ್ಲಿ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೀಗ ಏಳು ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಸಿಎಂ ಜುಲೈ, ಆಗಸ್ಟ್, ತಿಂಗಳಲ್ಲಿ ಏಳು ಗಂಟೆ ಸಮರ್ಪಕ ವಿದ್ಯುತ್ ಕೊಟ್ಟಿದ್ದರೆ ರೈತರು ಮೆಕ್ಕೆಜೋಳ ಹಾಗೂ ಭತ್ತದ ಬೆಳೆಯನ್ನು ಉಳಿಸಿಕೊಳ್ಳುತ್ತಿದ್ದರು. ಆದರೆ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ರೈತರು ಸಂಪೂರ್ಣ ಫಸಲನ್ನು ಹಾಳು ಮಾಡಿಕೊಳ್ಳುವಂತಾಯಿತು ಎಂದು ದೂರಿದರು.
ತಾಲೂಕಿನಲ್ಲಿ 3980 ಹೆಕ್ಟೆರ್ ಭತ್ತದ ಬೆಳೆ ಹಾಗೂ 16210 ಹೆಕ್ಟೆರ್ ಮೆಕ್ಕೆಜೋಳದ ಬೆಳೆಯು ಹಾಳಾಗಿದ್ದು, ಒಟ್ಟಾರೆ 20190 ಹೆಕ್ಟೆರ್ ಬೆಳೆಯು ನಾಶವಾಗಿದೆ. ಕೂಡಲೇ ರಾಜ್ಯ ಸರ್ಕಾರವು ಎಸ್‌ಡಿಆರ್‌ಎಫ್ ಹಣದಿಂದ ಜಿಲ್ಲಾಧಿಕಾರಿ ಮೂಲಕ ತಕ್ಷಣವೇ ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಎನ್‌ಡಿಆರ್‌ಎಫ್ ಮೂಲಕ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹಣವನ್ನು ಬಿಡುಗಡೆ ಮಾಡಲಿದ್ದು, ಅದಕ್ಕೆ ಮ್ಯಾಚಿಂಗ್ ಗ್ರಾಂಟ್ ಆಗಿ ಎಸ್‌ಟಿಆರ್‌ಎಫ್ ಮೂಲಕ ಅಷ್ಟೇ ಮೊತ್ತದ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದ ಅವರು, ಎನ್‌ಡಿಆರ್‌ಎಫ್ ಮೂಲಕ ₹80,000 ಕೋಟಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಮನವಿ ಸಲ್ಲಿಸಿದೆ. ಶೀಘ್ರವೇ ಕೇಂದ್ರ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಲಿದೆ, ಆದರೆ ಅಷ್ಟೇ ಪ್ರಮಾಣದ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪಿಎಸ್‌ಐ, ಡಿಸಿಸಿಬಿ ಹಗರಣಗಳಲ್ಲಿ ವಿಜಯೇಂದ್ರ, ರಾಘವೇಂದ್ರ ಕೈವಾಡ: ಬೇಳೂರು ಗೋಪಾಲಕೃಷ್ಣ
ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕನಿಲ್ಲದೆ ಬರ ಅಧ್ಯಯನ ನಡೆಸುತ್ತಿರುವುದು ಎಷ್ಟು ಪ್ರಸ್ತುತ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ಸಿನವರು ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಮರೆತು ವಿರೋಧ ಪಕ್ಷದ ತಟ್ಟೆಯಲ್ಲಿನ ನೊಣವನ್ನು ಎತ್ತಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ವತಿಯಿಂದ ನಡೆಸುತ್ತಿರುವ ಬರ ಅಧ್ಯಯನದ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಸಂಸದರು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಶಾಸಕ ಅಶೋಕ್ ನಾಯ್ಕ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಸಾರೆಕೊಪ್ಪ ರಾಮಚಂದ್ರ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಕುಮಾರ್ ಗೌಡ, ಕವಲಿ ಸುಬ್ರಹ್ಮಣ್ಯ, ನಿಂಬೆಗೊಂದಿ ಸಿದ್ದಲಿಂಗಪ್ಪ, ರಾಜಶೇಖರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.