ಸಾಗರದ ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಶಿವಮೊಗ್ಗ ಜಿಲ್ಲೆಯ ಸಾಗರದ ಲಾಡ್ಜ್‌ನಲ್ಲಿ 33 ವರ್ಷದ ಬೇಕರಿ ಮಾಲೀಕ ಜಿತೇಂದ್ರ ನಾಯ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮೀಟರ್ ಬಡ್ಡಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ (ಡಿ.11): ಜಿಲ್ಲೆಯ ಸಾಗರ ನಗರದ ಬಿಹೆಚ್ ರಸ್ತೆಯಲ್ಲಿ ಇರುವ ಖಾಸಗಿ ಲಾಡ್ಜ್ ಒಂದರಲ್ಲಿ 33 ವರ್ಷದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಹೊಸನಗರ ತಾಲೂಕಿನ ನಗರ ಗ್ರಾಮದಲ್ಲಿ ಬೇಕರಿ ಇಟ್ಟಿಕೊಂಡು ಕಳೆದ ಐದು ವರ್ಷಗಳಿಂದ ಜೀವನ ನಡೆಸುತ್ತಿದ್ದ ಜಿತೇಂದ್ರ ಮಹಬ್ಲೇಶ್ವರ ನಾಯ್ಕ (33) ಮಂಗಳವಾರ ಮಧ್ಯರಾತ್ರಿ ಸಾಗರದ ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿತೇಂದ್ರ ಮಹಾಬಲೇಶ್ವರ ನಾಯ್ಕ ಮೂಲತಃ ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ನಿವಾಸಿಯಾಗಿದ್ದು ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಗ್ರಾಮದಲ್ಲಿ ಸ್ವಾದಿಸ್ತಾ ಬೇಕರಿ ಮತ್ತು ಕ್ಯಾಂಡಿಮೆಂಟ್ಸ್ ಉದ್ಯೋಗ ನಡೆಸುತ್ತಿದ್ದರು.
ಸಾಗರ ಪೇಟೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಜಿತೇಂದ್ರ ಮಹಾಬಲೇಶ್ವರ ನಾಯ್ಕ ಮೀಟರ್ ಬಡ್ಡಿಗೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಸಾಗರ ಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಯಾಗಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.