Asianet Suvarna News Asianet Suvarna News

ಜನವರಿ 19 ರಿಂದ 3 ದಿನ ಪಲ್ಸ್ ಪೋಲಿಯೋ ಲಸಿಕೆ

ಮೂರು ದಿನಗಳ ಕಾಲ ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮೂರು ದಿನಗಳ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವದು ಎಂದು ಹೇಳಿದ್ದಾರೆ. 

Shivamogga 3 day pulse polio drive from January 19
Author
Bengaluru, First Published Jan 7, 2020, 11:19 AM IST

ಶಿವಮೊಗ್ಗ [ಜ.07]:  ಜನವರಿ 19ರಿಂದ ಮೂರು ದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಆಂದೋಲನ ಅಂಗವಾಗಿ ಜಿಲ್ಲೆಯಾದ್ಯಂತ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನ ನಡೆಸಲು ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು.

ನಗರ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವೇಳೆ 0-5ವರ್ಷದೊಳಗಿನ ಗ್ರಾಮಾಂತರದ 93,740, ನಗರ ಪ್ರದೇಶದ 54,935 ಮಕ್ಕಳು ಸೇರಿ ಒಟ್ಟು 1,48,675ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೊಳಚೆ ಪ್ರದೇಶ, ಅಲೆಮಾರಿಗಳು, ಇಟ್ಟಿಗೆ ಗೂಡುಗಳು, ಕಟ್ಟಡ ನಿರ್ಮಾಣ ಸ್ಥಳ, ಇತರೆ ವಲಸೆಗಾರರ ಪ್ರದೇಶ, ಸೆಟಲ್ಡ್‌ ಮತ್ತು ಅಪಾಯಕಾರಿ ಪ್ರದೇಶದಲ್ಲಿ ನೆಲೆಸಿರುವ ಮಕ್ಕಳಿಗೆ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ 867 ಲಸಿಕಾ ಕೇಂದ್ರ ಹಾಗೂ ನಿರ್ವಹಣೆಗೆ 1,734 ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಇವರೊಂದಿಗೆ 4,328 ವ್ಯಾಕ್ಸಿನೇಟ​ರ್, 210 ಮೇಲ್ವಿಚಾರಕರು, 30 ಟ್ರಾನ್ಸಿಟ್‌ ಹಾಗೂ 19 ಸಂಚಾರಿ ತಂಡ ರಚಿಸಲಾಗಿದೆ. ಯಶಸ್ಸಿಗೆ 600 ಆರೋಗ್ಯ ಸಿಬ್ಬಂದಿ ಮತ್ತು ಮೇಲ್ವಿಚಾರಕರು, 2,402 ಅಂಗನವಾಡಿ ಕಾರ್ಯಕರ್ತೆಯರು, 1279 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 4,281 ಸಿಬ್ಬಂದಿ ನಿಯೋಜಿಸಲಾಗಿದೆ. 163ಮಂದಿ ಕಾರ್ಯಕ್ರಮ, ಉಸ್ತುವಾರಿ, ವೈದ್ಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

9429 ವಯಲ್ಸ್‌ ಲಸಿಕೆ ಅಗತ್ಯವಾಗಿದ್ದು, ನಿಗದಿತ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಲಸಿಕೆ ಸುರಕ್ಷಿತವಾಗಿಡಲು ಕ್ರಮ ವಹಿಸಲಾಗಿದೆ. ಲಸಿಕೆ ನಿಗದಿತ ಸ್ಥಳಕ್ಕೆ ತಲುಪಿಸಲು ವಾಹನ ಒದಗಿಸಲಾಗುವುದು ಎಂದರು.

ಡಾ. ಆರ್‌.ನಾರಾಯಣ್‌ ಮಾತನಾಡಿ, ಪಲ್ಸ್‌ ಪೋಲಿಯೋ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದು 25 ಸಂವತ್ಸರ ಕಳೆಯುತ್ತಿರುವ ಈ ಸಂದರ್ಭದಲ್ಲಿ ದೇಶದಲ್ಲಿ ಕಳೆದ 9 ವರ್ಷಗಳಿಂದ ಈ ರೋಗಾಣು ಪತ್ತೆಯಾಗಿಲ್ಲದಿರುವುದು ಸಂತಸದ ಸಂಗತಿ. ಆದರೂ ನೆರೆಯ ಪಾಕಿಸ್ತಾನದಂತಹ ರಾಷ್ಟ್ರದಲ್ಲಿ ಇಂದಿಗೂ ಪೋಲಿಯೋ ಜೀವಂತವಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಆದರೆ ಈಗಾಗಲೇ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಘೋಷಿಸಲಾಗಿದೆ. ಈ ಲಸಿಕಾ ಆಂದೋಲನದಲ್ಲಿ ಶಿವಮೊಗ್ಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಮಾದರಿಯಾಗಿ ಅನುಷ್ಠಾನಕ್ಕೆ ತಂದ ತೃಪ್ತಿ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ ಸುರಗೀಹಳ್ಳಿ, ಆರ್‌ಸಿಎಚ್‌ ಡಾ. ನಾಗರಾಜ್‌ನಾಯ್‌್ಕ, ಡಾ. ಶಂಕರಪ್ಪ, ಡಾ. ನಟರಾಜ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios