ಬೆಂಗಳೂರು [ಡಿ.29]: ಹೊಸ ವರ್ಷಾಚರಣೆ ಮುನ್ನವೇ ನಗರದಲ್ಲಿ ರಿವಾಲ್ವರ್‌ ತೋರಿಸಿ ಸಾರ್ವಜನಿಕರಿಗೆ ಬೆದರಿಕೆ ಹಾಕಿ ಸುಲಿಗೆ ಕೃತ್ಯ ಎಸಗಲು ಮುಂಬೈನಿಂದ ಬಂದಿದ್ದ ದುಷ್ಕರ್ಮಿಯೊಬ್ಬ ಶಿವಾಜಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಕನ್ನಳ್ಳಿ ಗ್ರಾಮದ ಶೇಖ್‌ ಮುಸ್ತಫಾ ಬಂಧಿತನಾಗಿದ್ದು, ಆರೋಪಿಯಿಂದ ನಾಡ ಪಿಸ್ತೂಲ್‌ ಹಾಗೂ ಎರಡು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಶಿವಾಜಿನಗರ ಸಮೀಪದ ಬ್ರಾಡ್‌ ವೇ ರಸ್ತೆಯಲ್ಲಿ ಮುಸ್ತಫಾ ಕೈಯಲ್ಲಿ ರಿವಾಲ್ವರ್‌ ನೋಡಿದ ಸಾರ್ವಜನಿಕರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದರೋಡೆ ಕೃತ್ಯದ ಸಿದ್ಧತೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ ಟು ಬೆಂಗಳೂರು:

ಸಿದ್ದಾಪುರ ತಾಲೂಕಿನ ಶೇಖ್‌, ವರ್ಷದ ಹಿಂದೆ ಉದ್ಯೋಗ ಅರಸಿ ದುಬೈಗೆ ತೆರಳಿದ್ದ. ಅಲ್ಲಿ ಎರಡು ತಿಂಗಳು ಕೆಲಸ ಮಾಡಿದ ಆತ, ಕೊನೆಗೆ ಮುಂಬೈ ಬಂದಿಳಿದ. ನಂತರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ ಶೇಖ್‌, ಗ್ರಾಹಕರ ಜತೆ ಕನ್ನಡದಲ್ಲೇ ವ್ಯವಹರಿಸುತ್ತಿದ್ದ. ಆಗ ಶೇಖ್‌ಗೆ ವ್ಯಕ್ತಿಯೊಬ್ಬನ ಪರಿಚಯವಾಯಿತು. ‘ನಮ್ಮ ಗೆಳೆಯನೊಬ್ಬ ಕನ್ನಡ ಮಾತಾಡುತ್ತಾನೆÜ. ಅವನ ಜತೆ ಸೇರಿದರೆ ನೀನು ಹಣ ಸಂಪಾದಿಸಬಹುದು’ ಎಂದು ಹೇಳಿದ ಆತ, ಶೇಖ್‌ನನ್ನು ಕುಖ್ಯಾತ ದರೋಡೆಕೋರ ಕಿಂಗ್‌ ಮಾಯಾನಿಗೆ ಸ್ನೇಹ ಮಾಡಿಸಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನಂತರ ಕಿಂಗ್‌ ಹಾಗೂ ಶೇಖ್‌, ಮಂಬೈನಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ ಡಿ.4 ರಂದು ರಾತ್ರಿ ಅಂದೇರಿಯಾದ ಪೆಟ್ರೋಲ್‌ ಬಂಕ್‌ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆ ಯತ್ನವು ವಿಫಲವಾಯಿತು. ಬಳಿಕ ಕಿಂಗ್‌ ಬಳಿ ಎರಡು ರಿವಾಲ್ವರ್‌ಗಳಿರುವುದನ್ನು ಗಮನಿಸಿದ ಶೇಖ್‌, ಆತನಿಂದ ಒಂದನ್ನು ಕದ್ದು ತಾನೇ ಪ್ರತ್ಯೇಕ ದರೋಡೆ ಗ್ಯಾಂಗ್‌ ಕಟ್ಟಲು ಯೋಜಿಸಿದ್ದ. ಅಂತೆಯೇ ಮರುದಿನ ರಾತ್ರಿ ಕಿಂಗ್‌ ನಿದ್ರೆ ಮಾಡುವಾಗ ಆತ ಪಿಸ್ತೂಲ್‌ ಕದ್ದು ಬೆಂಗಳೂರಿಗೆ ಆತ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅನಂತರ ಶಿವಾಜಿನಗರ ಸಮೀಪದ ಬ್ರಾಡ್‌ ವೇ ರಸ್ತೆಯ ಲಾಡ್ಜ್‌ನಲ್ಲಿ ಕೊಠಡಿ ಪಡೆದ ಶೇಖ್‌, ನಗರದಲ್ಲಿ ರಿವಾಲ್ವರ್‌ ತೋರಿಸಿ ಸುಲಿಗೆ ನಡೆಸಲು ಸಿದ್ಧತೆ ನಡೆಸಿದ್ದ. ಆದರೆ ಸಂಚು ಕಾರ್ಯ ರೂಪಕ್ಕಿಳಿಯುವ ಮುನ್ನವೇ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಅಂದೇರಿಯಾ ಪೆಟ್ರೋಲ್‌ ಬಂಕ್‌ ದರೋಡೆ ಯತ್ನ ಪ್ರಕರಣದಲ್ಲಿ ಕಿಂಗ್‌ನನ್ನು ಬಂಧಿಸಿದ್ದ ಮುಂಬೈ ಪೊಲೀಸರು, ಶೇಖ್‌ಗೆ ಹುಡುಕಾಟ ನಡೆಸಿದ್ದರು. ಆಗ ಅಲ್ಲಿನ ಪೊಲೀಸರಿಗೆ ಸಹ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ ಕಳ್ಳತನದಲ್ಲಿ ಕುಖ್ಯಾತಿ!

ಶೇಖ್‌ ಮುಸ್ತಾಫ ಬೈಕ್‌ ಕಳ್ಳತನ ಮಾಡುವುದರಲ್ಲಿ ಚಾಣಾಕ್ಷನಾಗಿದ್ದಾನೆ. ಈಗ ಸಾಗರ, ಸಿರ್ಸಿ, ಶಿವಮೊಗ್ಗ, ಹೊಸನಗರಗಳಲ್ಲಿ ಬೈಕ್‌ ಕಳ್ಳತನ ಮಾಡಿದ್ದ. ಈತನ ವಿರುದ್ಧ 10ಕ್ಕೂ ಪ್ರಕರಣಗಳು ದಾಖಲಾಗಿವೆ. ಬೈಕ್‌ ಕಳ್ಳತನ ಪ್ರಕರಣದಲ್ಲಿ ಆತನನ್ನು ಸ್ಥಳೀಯ ಪೊಲೀಸರು ಹುಡುಕುತ್ತಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ದುಬೈಗೆ ತೆರಳಿದ್ದ. ಈತನ ವಿರುದ್ಧ ಬಂಧನ ವಾರಂಟ್‌ ಜಾರಿಯಾಗಿತ್ತು. ಈ ವಿಷಯ ತಿಳಿದ ದುಬೈ ಪೊಲೀಸರು ಆತನನ್ನು ಗಡಿ ಪಾರು ಮಾಡಿದ್ದರು.