Belagavi: ಕುಂದಾನಗರಿ ಬೆಳಗಾವಿಯಲ್ಲಿ ತಲೆ ಎತ್ತಲಿದೆ 'ಶಿವಚರಿತ್ರೆ ತಾಣ'

* ಉದ್ಘಾಟನೆಗೆ ಯೋಗಿ ಆದಿತ್ಯನಾಥ್ ಕರೆಸಲು ಅಭಯ್ ಪಾಟೀಲ್ ತಯಾರಿ
* ಚುನಾವಣೆಗೂ ಮುನ್ನ ಹಿಂದುತ್ವ ಅಲೆ ಸೃಷ್ಟಿಗೆ ಬಿಜೆಪಿ ಮಾಸ್ಟರ್‌ಪ್ಲ್ಯಾನ್?
*ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ಗರಿಗೆದರಿದ ಚರ್ಚೆ

shivacharithre program to showcase chartrapathi shivaji at belagavi gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಏ.02): ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ (Karnataka) ಹಿಂದೂತ್ವದ ಅಲೆ ಸೃಷ್ಟಿಸಲು ಬಿಜೆಪಿ (BJP) ಮಾಸ್ಟರ್‌‌ ಪ್ಯಾನ್ ಮಾಡುತ್ತಿದೆಯಾ? ಇಂತಹದ್ದೊಂದು ಚರ್ಚೆ ಸದ್ಯ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ (Abhay Patil) ತಮ್ಮ ಕನಸಿನ ಯೋಜನೆಯ ಉದ್ಘಾಟನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ (Yogi Adityanath) ಆಹ್ವಾನಿಸಲಿದ್ದು, ಜೊತೆಗೆ ಒಂದು‌ ಲಕ್ಷ ಕೇಸರಿ ಶಾಲು ಆರ್ಡರ್ ಮಾಡಲು ನಿರ್ಧರಿಸಿರೋದು‌‌‌‌. 

ಬೆಳಗಾವಿಯ ಶಹಾಪುರದ ಎಸ್‌ಪಿಎಂ ರಸ್ತೆಯಲ್ಲಿ ಇರುವ ಛತ್ರಪತಿ ಶಿವಾಜಿ (Chartrapathi Shivaji) ಮಹಾರಾಜರ ಉದ್ಯಾನವನದ ಪಕ್ಕದಲ್ಲಿ ಶಿವಚರಿತ್ರೆ (Shivacharithre) ತಾಣ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಜೀವನಚರಿತ್ರೆ ಸಾರುವ ಕಲಾಕೃತಿಗಳ ಜೊತೆ ಧ್ವನಿ ಬೆಳಕಿನ ಕಾರ್ಯಕ್ರಮದ ಯೋಜನೆ ಇದಾಗಿದ್ದು. ಹತ್ತು ಕೋಟಿ ವೆಚ್ಚದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ  2012ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ 2017ರಲ್ಲಿ ಅಂದಿನ ಮೇಯರ್ ಉದ್ಘಾಟನೆ ಮಾಡಿದ್ದರು. ಆದರೆ ಈಗ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದೊಂದಿಗೆ ಯೋಜನೆ ಪೂರ್ಣಗೊಳಿಸಲಾಗುತ್ತಿದ್ದು ಮುಂದಿನ ವಾರ ಕಾರ್ಯಕ್ರಮದ ಟ್ರಯಲ್ ಶೋ ನಡೆಸುವ ಸಾಧ್ಯತೆ ಇದೆ.‌

ಒಬ್ಬ ತಾಯಿ ಮನಸ್ಸು ಮಾಡಿದ್ರೆ ಏನ್ ಮಾಡಬಹುದು ಅಂತಾ ಜನರಿಗೆ ತೋರಿಸುವ ಪ್ರಯತ್ನ: ಶಿವಚರಿತ್ರೆ ತಾಣಕ್ಕೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ಶಾಸಕ ಅಭಯ್ ಪಾಟೀಲ, 'ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಸಾರುವ ಶಿವಚರಿತ್ರೆಯ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಯೋಜನೆ ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಹತ್ತು ಕೋಟಿ ರೂಪಾಯಿ ಖರ್ಚು ಮಾಡಿ ಈ ಯೋಜನೆ ಪೂರ್ಣಗೊಳಿಸಲಾಗಿದೆ. 

ಬಡ ಜನರಿಗೆ ಉಚಿತವಾಗಿ ತಿರುಪತಿ ತಿಮ್ಮಪ್ಪನ ದರ್ಶನ‌ ಮಾಡಿಸಿ ಭಕ್ತಿ ಮೇರೆಯುವ ಚಿಕ್ಕೋಡಿಯ ಕುಮಾರ್ ಪಾಟೀಲ್

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಎಲ್ಲರಿಗೂ ಅಭಿಮಾನವಿದ್ದು ಸ್ವಾಭಿಮಾನದ ಪ್ರತೀಕ. ಒಬ್ಬ ತಾಯಿ ಮನಸ್ಸು ಮಾಡಿದರೆ ಏನು ಮಾಡಬಹುದು. ಯಾವ ರೀತಿ ಶಿವಾಜಿ ಮಹಾರಾಜರನ್ನು ಆ ಮಹಾ ತಾಯಿ ತಯಾರು ಮಾಡಿದರೂ ಎಂಬ ಬಗ್ಗೆ 45 ನಿಮಿಷದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದಲ್ಲಿ ಇರುತ್ತೆ. ಒಬ್ಬ ಬಾಲಕ ಯಾವ ರೀತಿ ಹೋರಾಟ ಮಾಡಿದ, ರಾಜಾಡಳಿತ ಮಾಡಿದ ಎಂಬುದು ಇರುತ್ತೆ. ಈ ಕಾರ್ಯಕ್ರಮ ನೋಡಿದ ಮೇಲೆ ನಿಶ್ಚಯವಾಗಿ ಪ್ರತಿಯೊಬ್ಬರಿಗೂ ಸ್ವಾಭಿಮಾನ, ದೇಶಾಭಿಮಾನ ನಿಶ್ಚಿತವಾಗಿ ಜಾಗೃತವಾಗುತ್ತೆ' ಎಂದು ತಿಳಿಸಿದ್ದಾರೆ

ಶಿವಚರಿತ್ರೆ ತಾಣ ಉದ್ಘಾಟನೆಗೆ ಯೋಗಿ ಆದಿತ್ಯನಾಥ್‌ರಿಗೆ ಆಹ್ವಾನ - ಒಂದು ಲಕ್ಷ ಕೇಸರಿ ಶಾಲು ಆರ್ಡರ್: ಈ ಶಿವಚರಿತ್ರೆ ತಾಣವನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿರವರಿಂದ ಉದ್ಘಾಟಿಸಬೇಕೆಂಬುದು ಜನರ ಆಪೇಕ್ಷೆ ಇದೆ. ಹೀಗಾಗಿ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತನಾಡಿದ್ದು ಇಂದು ಅಥವಾ ನಾಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಿಗೆ ಆಹ್ವಾನ ನೀಡುವ ಸಂಬಂಧ ಪತ್ರ ಬರೆಯಲಿದ್ದಾರೆ. ಆ ಪತ್ರದೊಂದಿಗೆ ಲಖನೌಗೆ ತೆರಳಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಿಗೆ ಆಹ್ವಾನ ಮಾಡಿ ಬರುವೆ. ಮೇ 2ರಂದು ಈ ಶಿವಚರಿತ್ರೆ ತಾಣ ಉದ್ಘಾಟನೆ ಮಾಡಬೇಕೆಂದು ಯೋಚಿಸಿದ್ದಾಗಿ ಅಭಯ್ ಪಾಟೀಲ್ ತಿಳಿಸಿದ್ದಾರೆ‌. 

ಶಿವಚರಿತ್ರೆ ತಾಣ ಉದ್ಘಾಟನೆಗೆ ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದ್ದು ಸಮಾರಂಭಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕೇಸರಿ ಶಾಲು ನೀಡಲು ಶಾಸಕ ಅಭಯ್ ಪಾಟೀಲ ನಿರ್ಧರಿಸಿದ್ದಾರೆ.  ಈ ಕುರಿತು ಮಾತನಾಡಿರುವ ಶಾಸಕ ಅಭಯ್ ಪಾಟೀಲ್, '10 ಕೋಟಿ ವೆಚ್ಚದಲ್ಲಿ ಶಿವಚರಿತ್ರೆ ತಾಣ ನಿರ್ಮಾಣ ಮಾಡ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನಚರಿತ್ರೆ ಆಧರಿಸಿ ಕಲಾಕೃತಿಗಳ ಮೂಲಕ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮದ ಯೋಜನೆ ಇದಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಎಲ್ಲ ಹಿಂದೂಗಳಿಗೂ ಅಭಿಮಾನ ಇದೆ.‌ಈ ಕಾರ್ಯಕ್ರಮ ಉದ್ಘಾಟನೆಗೆ ಒಂದು ಲಕ್ಷ ಕೇಸರಿ ಶಾಲು ನೀಡಬೇಕೆಂದು ಯುವಕರ ಆಪೇಕ್ಷೆ ಇದೆ.‌ ಡೇಟ್ ಫಿಕ್ಸ್ ಆದ್ಮೇಲೆ ಇಚಲಕರಂಜಿ ಸೇರಿ ವಿವಿಧೆಡೆ ಕೇಸರಿ ಶಾಲು ಆರ್ಡರ್ ಮಾಡಲಾಗುವುದು.‌ನಾನು ಈ ಹಿಂದೆ ಬೈಕ್ ರ್ಯಾಲಿ ಸೇರಿ ಪ್ರತಿಯೊಂದು ಕಾರ್ಯಕ್ರಮಕ್ಕೆ ಕೇಸರಿ ಶಾಲು ನೀಡುತ್ತಿದೆ.

ಓರ್ವನ ಹತ್ಯೆ, 6 ಜನರಿಗೆ ಗಾಯ: ಬೆಳಗಾವಿಯ ಗ್ಯಾಂಗ್‌ವಾರ್‌ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನ

ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮೂಲಕ ಒಂದು ಸಲಕ್ಕೆ 200 ಜನ ಹೆಡ್‌ಫೋನ್ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು ಶೇಕಡ 95ರಷ್ಟು ಕಾಮಗಾರಿ ಮುಗಿದಿದೆ. ಮುಂದಿನ ವಾರ ಟ್ರಯಲ್ ಶೋ ಮಾಡ್ತೇವೆ' ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಈ ಮಧ್ಯೆ ಆಡಳಿತಾರೂಢ ಬಿಜೆಪಿ ಶಾಸಕ ಒಂದು ಲಕ್ಷ ಕೇಸರಿ ಶಾಲು ಆರ್ಡರ್ ಮಾಡೋದಾಗಿ ತಿಳಿಸಿದ್ದು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ತರಹೇವಾರು ಚರ್ಚೆಗೆ ಕಾರಣವಾಗಿದೆ. ಅದೇನೇ ಇರಲಿ ಹತ್ತು ಕೋಟಿ ವೆಚ್ಚದಲ್ಲಿ ಕಳೆದೊಂದು ದಶಕದಿಂದ ನಿರ್ಮಾಣ ಆಗುತ್ತಿರುವ ಶಿವಚರಿತ್ರೆ ತಾಣ ಆದಷ್ಟು ಬೇಗ ಉದ್ಘಾಟನೆ ಆಗಿ ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂಬುದು ಸಾರ್ವಜನಿಕರ ಆಶಯ.

Latest Videos
Follow Us:
Download App:
  • android
  • ios