ಓರ್ವನ ಹತ್ಯೆ, 6 ಜನರಿಗೆ ಗಾಯ: ಬೆಳಗಾವಿಯ ಗ್ಯಾಂಗ್‌ವಾರ್ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನ
* ಬೆಳಗಾವಿಯಲ್ಲಿ ಗ್ಯಾಂಗ್‌ವಾರ್, ಓರ್ವನ ಹತ್ಯೆ, 6 ಜನರಿಗೆ ಗಾಯ
* ಗ್ಯಾಂಗ್‌ವಾರ್ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನದಲ್ಲಿದ್ದ ಮಾರಕಾಸ್ತ್ರಗಳು..!
* ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ಮಾರಿಹಾಳ ಪೊಲೀಸ್ರು
ವರದಿ: ಮಹಾಂತೇಶ್ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಮಾ.31): ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಹೊರವಲಯದಲ್ಲಿ ಭೀಕರ ಗ್ಯಾಂಗ್‌ವಾರ್ ನಡೆದಿದ್ದು ಓರ್ವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು, ಆರು ಜನರಿಗೆ ಗಾಯವಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳಗಾವಿ (Belagavi) ಜಿಲ್ಲೆ ಬೈಲಹೊಂಗಲ ತಾಲೂಕಿನ 25 ವರ್ಷದ ಮುದುಕಪ್ಪ ಅಂಗಡಿ ಮೃತ ದುರ್ದೈವಿ. ಕರಡಿಗುದ್ದಿ ಗ್ರಾಮದ ಸುನಿಲ್ ಅರಬಳ್ಳಿ, ಬರ್ಮಜ ಅರಬಳ್ಳಿ, ವಿಠ್ಠಲ್ ಅರಬಳ್ಳಿ ಹಾಗೂ ಮಾರಿಹಾಳ ಗ್ರಾಮದ ಲಕ್ಕಪ್ಪ ಹಳ್ಳಿ, ವಿಶಾಲ ಬಾಗಡಿ ಹಾಗೂ ಕೊಲೆಯಾದ ಮುದುಕಪ್ಪ ಅಂಗಡಿ ಸ್ನೇಹಿತ ರಮೇಶ್ ಎಂಬಾತನಿಗೆ ಗಾಯಗಳಾಗಿದ್ದು ಈ ಪೈಕಿ ರಮೇಶ್ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಆರು ಗಾಯಾಳುಗಳ ಪೈಕಿ ಸುನಿಲ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇನ್ನುಳಿದ ಐವರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀಗ ಹಾಕಿದ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ನಾಲ್ವರ ಶವ ಪತ್ತೆ
ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಆಗ್ತಿದ್ದ ಮುದುಕಪ್ಪ ಅಂಗಡಿ
ಇನ್ನು ಕೊಲೆಯಾದ ಮುದುಕಪ್ಪ ಅಂಗಡಿ ವಿರುದ್ಧ ನೇಸರಗಿ ಠಾಣೆಯಲ್ಲಿ ಈ ಹಿಂದೆ ಕೆಲವು ಕೇಸ್‌ಗಳು ಸಹ ದಾಖಲಾಗಿದ್ವಂತೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಸ್ನೇಹಿತರ ಜೊತೆ ಬೆಳಗಾವಿಗೆ ಬಂದಿದ್ದ ಮುದುಕಪ್ಪ ಅಂಗಡಿ ವಾಪಸ್ ಸ್ವಗ್ರಾಮ ಸುಣಕುಪ್ಪಿಗೆ ತೆರಳುವ ವೇಳೆ ಹತ್ಯೆಗೀಡಾಗಿದ್ದಾನೆ. ಇನ್ನು ಘಟನೆಯಲ್ಲಿ ಕೊಲೆಯಾದ ಮುದುಕಪ್ಪ ಅಂಗಡಿ ಸ್ನೇಹಿತ ರಮೇಶ್‌ಗೆ ಗಂಭೀರ ಗಾಯವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಗ್ಯಾಂಗ್‌ವಾರ್ ಭೀಕರತೆ ಬಿಚ್ಚಿಟ್ಟ ಬುಲೆರೋ ವಾಹನ
ಇನ್ನು ಆಸ್ಪತ್ರೆ ಎದುರು ಗಾಯಾಳುಗಳನ್ನು ಕರೆದುಕೊಂಡ ಬಂದ ಬುಲೆರೋ ವಾಹನದಲ್ಲಿ ಮಚ್ಚು, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದು ಬುಲೆರೋ ವಾಹನದ ಗಾಜು ಜಖಂಗೊಂಡಿದೆ. ಇನ್ನು ಗ್ಯಾಂಗ್‌ವಾರ್‌ನಲ್ಲಿ ಕರಡಿಗುದ್ದಿ ನಿವಾಸಿ ಸುನಿಲ್ ಎಂಬ ಯುವಕನ ಬೆರಳುಗಳು ಕಟ್ ಆಗಿದ್ದು ಏನಾಯ್ತು ಅಂತಾ ಕೇಳಿದ್ರೆ 'ನನಗೇನು ಗೊತ್ತಿಲ್ಲ. ಬುಲೆರೋ ವಾಹನದಲ್ಲಿ ಬಂದಿದ್ದ ಸುಮಾರು ಹತ್ತು ಜನರ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಹೊಡೆಯಲು ಶುರು ಮಾಡಿತು. ಏಕೆ ಹೊಡೆಯುತ್ತಿದ್ರು ಅನ್ನೋದೇ ಗೊತ್ತಿಲ್ಲ. ನಮ್ಮ ಊರಲ್ಲಿ ಜಾತ್ರೆ ಇತ್ತು. ಸಾಮೂಹಿಕ ವಿವಾಹಗಳು ಸಹ ಇದ್ದು ನನ್ನ ಅಣ್ಣನ ಮದುವೆ ಇತ್ತು.
ಮುದುಕಪ್ಪ ಅಂಗಡಿ ಸತ್ತ ಬಗ್ಗೆ ನನಗೆ ಗೊತ್ತಿಲ್ಲ. ಏಕೆ ಹೊಡೆದರು ಅಂತಾ ಅವರನ್ನೇ ಕೇಳಿ ಅಂತಿದ್ದಾನೆ. ಇನ್ನು ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದು ತಲೆಮರಿಸಿಕೊಂಡ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಷ್ಟಕ್ಕೂ ಎರಡು ಗುಂಪುಗಳ ಮಧ್ಯೆ ಈ ರೀತಿ ಭೀಕರ ಕಾಳಗ ನಡೆಯಲು ಹಳೆಯ ದ್ವೇಷ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಅಸಲಿಗೆ ಗಲಾಟೆ ನಡೆಯಲು ಅಸಲಿ ಕಾರಣ ಏನು ಎಂಬ ಬಗ್ಗೆ ಪೊಲೀಸರ ತನಿಖೆ ಬಳಿಕವಷ್ಟೇ ಗೊತ್ತಾಗಬೇಕಿದೆ.