ಮತ್ತೆ ಬೆಳಗಾವಿ ಗಡಿ ಕ್ಯಾತೆ ತೆಗೆದ ಶಿವಸೇನೆ, ಎಂಇಎಸ್: ಪ್ರಧಾನಿಗೆ ಪತ್ರ ಚಳವಳಿ
* ಪ್ರಧಾನಿ ನರೇಂದ್ರ ಮೋದಿಗೆ ಅಂಚೆ ಚೀಟಿ ಅಭಿಯಾನ
* ಮರಾಠಿ ಭಾಷಿಕರ ಮೇಲೆ ಅನ್ಯಾಯ
* 1956ರಿಂದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ
ಬೆಳಗಾವಿ(ಆ.12): ಗಡಿ ವಿವಾದ ಕೆಣಕುವ ಕಾರ್ಯಕ್ಕೆ ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕೈ ಹಾಕಿದೆ. ಗಡಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಚಳವಳಿ ಆರಂಭಿಸಿದ್ದಾರೆ.
ಎಂಇಎಸ್ ಮತ್ತು ಶಿವಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದ ಟಿಳಕ ಚೌಕ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಂಚೆ ಚೀಟಿ ಅಭಿಯಾನ ಆರಂಭಿಸಿದ್ದಾರೆ. 1956ರಿಂದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ಬೆಳಗಾವಿ ಸೇರಿದಂತೆ 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಭಾಷಾವಾರು ಪ್ರಾಂತ ರಚನೆಯಾದ ದಿನದಿಂದ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗುತ್ತಿದೆ. ಆದ್ದರಿಂದ ಗಡಿ ವಿವಾದವನ್ನು ಪ್ರಧಾನಮಂತ್ರಿ ಮೋದಿ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ್ದಾರೆ. ಅಲ್ಲದೇ ಮುಂದಿನ ವಾರದಲ್ಲಿ ಐದು ಸಾವಿರ ಪತ್ರಗಳನ್ನು ಪ್ರಧಾನಿ ಮೋದಿ ಅವರಿಗೆ ಕಳಿಸುವ ಗುರಿ ಇಟ್ಟುಕೊಂಡಿರುವ ಝಾಪಾಗಳು, ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ಗಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ ಗಡಿ ವಿವಾದ: ಮೋದಿ ಮಧ್ಯಪ್ರವೇಶಕ್ಕೆ ಮಹಾರಾಷ್ಟ್ರ ಪಟ್ಟು
ಈ ಸಂದರ್ಭದಲ್ಲಿ ಶಿವಸೇನಾ ನಗರ ಅಧ್ಯಕ್ಷ ಬಂಡು ಕೆರವಾಡ್ಕರ, ಪ್ರವೀಣ ತೇಜಂ, ದಿಲೀಪ್ ಬೈಲೂಕರ, ರಾಜು ತುಡೇಕರ, ರಾಜ್‌ಕುಮಾರ ಬೋಕಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇನ್ನು ಕರ್ನಾಟಕದೊಂದಿಗೆ ದಶಕಗಳ ಹಳೆಯ ಗಡಿ ವಿವಾದ ಇತ್ಯರ್ಥಕ್ಕೆ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಕೂಡ ಮನವಿ ಮಾಡಿದ್ದಾರೆ.