Asianet Suvarna News Asianet Suvarna News

ಕಾವೇರಿದ ಶಿರಸಿ ಪ್ರತ್ಯೇಕ ಜಿಲ್ಲೆ ವಿಚಾರ; ಪಕ್ಷಾತೀತವಾಗಿ ನಾಯಕರು ಬೆಂಬಲ

  • ಕಾವೇರಿದ ಶಿರಸಿ ಪ್ರತ್ಯೇಕ ಜಿಲ್ಲೆ ವಿಚಾರ
  • ಬೃಹತ್‌ ಪ್ರತಿಭಟನೆ, ಮೆರವಣಿಗೆ, ಟೈರ್‌ ಸುಟ್ಟು ಆಕ್ರೋಶ
  • ವಿದ್ಯಾರ್ಥಿಗಳಿಂದಲೂ ಸ್ಪಂದನೆ
  • ಪಕ್ಷಾತೀತ ನಾಯಕರು ಭಾಗಿ
Shirasi separate district issue  all party leaders support at uttarakarnataka rav
Author
First Published Dec 25, 2022, 10:17 AM IST

ಶಿರಸಿ (ಡಿ.25) : ಜಿಲ್ಲೆಯ ವಿಭಜನೆ, ಪ್ರತ್ಯೇಕ ಜಿಲ್ಲೆಯ ಕಾವು ಈಗ ಮತ್ತೆ ಹೆಚ್ಚಿದೆ. ಸಾವಿರಾರು ಜನರ ಬೃಹತ್‌ ಪ್ರತಿಭಟನೆ, ಮೆರವಣಿಗೆ, ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ಶನಿವಾರ ನಡೆದ ಪ್ರತ್ಯೇಕ ಜಿಲ್ಲೆಯ ಹೋರಾಟ ಇನ್ನಷ್ಟುಕಾವೇರುವಂತೆ ಮಾಡಿದೆ.

ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಪ್ರತಿಭಟನೆಗೆ ಸಾರ್ವಜನಿಕರು, ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ. ಪಕ್ಷಾತೀತವಾಗಿ, ಎಲ್ಲ ಪಕ್ಷಗಳ ನಾಯಕರೂ ಈ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಶಿರಸಿ ಜಿಲ್ಲೆಗೆ ಆಗ್ರಹಿಸಿ ಬಂದ್‌ : ಎರಡು ದಶಕದ ಬೇಡಿಕೆ

ನಗರದ ಅಂಚೆ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಶಿರಸಿ ಜಿಲ್ಲೆ ರಚನೆಯಿಂದ ಘಟ್ಟದ ಮೇಲಿನ ಶಿಕ್ಷಣಾಭಿಮಾನಿಗಳ ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗಳಾದ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಿಸಿಕೊಳ್ಳಲು ನೈತಿಕ ಬಲ ಬರುತ್ತದೆ. ಜಿಲ್ಲಾಧಿಕಾರಿಗೆ ಆಡಳಿತ ನಿರ್ವಹಣೆಯ ಭಾರ ತಗ್ಗುತ್ತದೆ. ಪ್ರತಿ ತಾಲೂಕುಗಳ ಎಲ್ಲ ಇಲಾಖಾ ಕಾರ್ಯವೈಖರಿ ಕುರಿತು ನಿಗಾ ವಹಿಸಲು ಹೆಚ್ಚಿನ ಸಮಯಾವಕಾಶ ಸಿಗುತ್ತದೆ. ಅಭಿವೃದ್ಧಿಪರ ಹತ್ತು ಹಲವು ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು.

ಆಡಳಿತಾತ್ಮಕ ಹಾಗೂ ಅಭಿವೃದ್ಧಿ ದೃಷ್ಟಿಕೋನಗಳನ್ನು ಇಟ್ಟುಕೊಂಡು ಶಿರಸಿ ಜಿಲ್ಲೆಯಾಗುವುದರಿಂದ ನಮ್ಮೆಲ್ಲ ಗುರಿ. ಶಿರಸಿ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಕೇಂದ್ರ ಸರ್ಕಾರದಿಂದ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಲ್ಪಡುವ ಸಾಧ್ಯತೆಯಿದೆ. ಅದರಿಂದಲೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯಲಿದೆ ಎಂದು ಹೇಳಿದರು.

ಜಿಲ್ಲಾ ಕೇಂದ್ರಕ್ಕೆ ಬೇಕಾಗುವ ಕಟ್ಟಡಗಳು ಲಭ್ಯವಿದೆ. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಆರ್ಥಿಕ ಕೇಂದ್ರವು ಶಿರಸಿಯೇ ಆಗಿದ್ದು, ಇಲ್ಲಿಯ ಹವಾಮಾನ ಹೊರಗಿನಿಂದ ಬಂದವರಿಗೆ ಹಾಗೂ ಸ್ಥಳೀಯರಿಗೆ ಬದುಕನ್ನು ಹಸನಾಗಿಸಿ ಹಿತವಾದ ಅನುಭವ ನೀಡಲಿದೆ. ಶಿರಸಿ ನಗರ ಎಂಟು ದಿಕ್ಕುಗಳಲ್ಲೂ ಬೆಳೆಯುತ್ತಿದೆ. ಆಡಳಿತಾತ್ಮಕ ಬೆಳವಣಿಗೆಗೆ ಅನುಕೂಲವಾಗುವಂತಹ ಪರಿಸರವಿದೆ. ಶಿರಸಿಯ ಸುತ್ತಮುತ್ತ ಸಾಕಷ್ಟುಪ್ರವಾಸಿ ಸ್ಥಾನಗಳ ಸೃಷ್ಟಿಯಿಂದ ಆದಾಯ ತರಬಲ್ಲದು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರಕನ್ನಡ ಜಿಲ್ಲೆ ಒಡೆಯಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಆದರೆ, ಜಿಲ್ಲೆಯ ಭೌಗೋಳಿಕ ಸ್ಥಿತಿ ಈ ಅನಿವಾರ್ಯತೆ ಸೃಷ್ಟಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಪ್ರತ್ಯೇಕ ಜಿಲ್ಲೆಯಾದರೆ ಉತ್ತಮ. ಕಾರವಾರಕ್ಕೆ ತೆರಳಿ ಕೆಲಸ ಮಾಡಿಕೊಂಡು ಬರಲು ಸಂಪೂರ್ಣ ದಿನವೇ ವ್ಯಯವಾಗುತ್ತದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಶಿರಸಿ ಜಿಲ್ಲೆ ನಿರ್ಮಾಣದ ಅಗತ್ಯತೆ ಬಗ್ಗೆ ಹೇಳಿದ್ದಾರೆ. ಅಗತ್ಯ ಕಟ್ಟಡ ನಿರ್ಮಾಣಕ್ಕೆ ಶಿರಸಿಯಲ್ಲಿ ಸೂಕ್ತ ಜಾಗ ಕೊಡೋಣ ಎಂದರು.

ನ್ಯಾಯವಾದಿ ಸದಾನಂದ ಭಟ್‌ ಮಾತನಾಡಿ, ಜಿಲ್ಲೆ ಇಬ್ಭಾಗ ಎನ್ನುವುದಕ್ಕಿಂತ ಅಭಿವೃದ್ಧಿಗೆ ಆದ್ಯತೆಯ ದೃಷ್ಟಿಯಿಂದ ಪ್ರತ್ಯೇಕಗೊಳ್ಳಬೇಕು. ಈ ಅಧಿವೇಶನದಲ್ಲಿ ಘೋಷಿಸಿದರೆ ಉತ್ತಮ. ಹೊಸ ಜಿಲ್ಲೆಗೆ ಡಿಸಿ, ಎಸ್‌ಪಿ ಕಚೇರಿ ಆಗಬೇಕಿದ್ದು, ಈಗಲೇ ಮುಂದಾಲೋಚನೆ ಮಾಡಿಕೊಳ್ಳಬೇಕು. ಸ್ಪೀಕರ್‌ ಕಾಗೇರಿಯವರ ಅಭಿಪ್ರಾಯಕ್ಕೆ ನಾವು ಮನ್ನಣೆ ನೀಡಬೇಕು ಎಂದರು. ಪ್ರತಿಭಟನೆಯಲ್ಲಿ 46ಕ್ಕೂ ಅಧಿಕ ಸಂಘಟನೆಯ ಕಾರ್ಯಕರ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Uttara Kannada: ಕದಂಬೋತ್ಸವ ಈ ವರ್ಷವೂ ಮರೀಚಿಕೆ?

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧಕ್ಷೆ ವೀಣಾ ಶೆಟ್ಟಿ, ದೀಪಕ ದೊಡ್ಡೂರು, ಎಂ.ಎಂ. ಭಟ್‌, ಉದಯಕುಮಾರ ಕಾನಳ್ಳಿ, ಬಸವರಾಜ ಓಶಿಮಠ, ಜಿ.ಎನ್‌. ಹೆಗಡೆ ಮುರೇಗಾರ, ಸುಷ್ಮಾ ರಾಜಗೋಪಾಲ, ಪರಮಾನಂದ ಹೆಗಡೆ ಇತರರು ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Follow Us:
Download App:
  • android
  • ios