ಸಂಚಾರಕ್ಕೆ ದುಸ್ತರವಾದ ಮಳಲಿ ರಸ್ತೆ ಶಿರಸಿ-ಕುಮಟಾ ಮಾರ್ಗದಲ್ಲಿ ಬದಲಿ ರಸ್ತೆಯಾಗಿ ಬಳಕೆ
ಶಿರಸಿ (ನ.6) : ಹಿಂದಿನ ಮಳೆಗಾಲದ ಅವಧಿಯಲ್ಲಿ ಶಿರಸಿ ಕುಮಟಾ ರಸ್ತೆಯ ಬದಲಿ ರಸ್ತೆಯಾಗಿ ಬಳಕೆ ಆದ ಮಳಲಿ ರಸ್ತೆ ಈಗ ಸಂಚಾರವೇ ಸಾಧ್ಯವಾಗದ ಸ್ಥಿತಿ ತಲುಪಿದೆ. ವರ್ಷಗಳೇ ಉರುಳಿ ಹೋದರೂ ಇಲ್ಲಿಯ ರಸ್ತೆ ಹೊಂಡ ತುಂಬದೇ ಮತ್ತೂ ಒಂದು ಮಳೆಗಾಲ ಕಳೆದುಹೋಗಿದೆ.
ರಸ್ತೆ ಕೆಸರು ಗದ್ದೆ, ವಾಹನ ಸಂಚಾರ ದುಸ್ತರ; ಸೌಲಭ್ಯ ವಂಚಿತ ಗ್ರಾಮ ದಿಬ್ಬದಹಟ್ಟಿ
ಶಿರಸಿ ಕುಮಟಾ ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2020 ರಿಂದಲೇ ಆರಂಭಿಸಲಾಗಿದೆ. ಈ ವೇಳೆ ರಸ್ತೆ ಸಂಚಾರಕ್ಕೆ ತೊಂದರೆ ಆಗಬಾರದು ಎಂದು ಅಧಿಕಾರಿಗಳು, ತಹಸೀಲ್ದಾರರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಶಿರಸಿಯಿಂದ ಹೆಗಡೆಕಟ್ಟಾಕ್ರಾಸ್ ವರೆಗೆ ಮುಖ್ಯ ರಸ್ತೆಯಲ್ಲಿ ಸಾಗಿ, ಆ ಬಳಿಕ ಹೆಗಡೆಕಟ್ಟಾಮಾರ್ಗವನ್ನು ಬಳಸಲು ಸೂಚಿಸಲಾಗಿತ್ತು. ಈ ರಸ್ತೆಯ ಮಳಲಿ ಕ್ರಾಸ್ ಬಳಿ ಮತ್ತೆ ಮಾರ್ಗ ಬದಲಿಸಿ, ಬನ್ನಿಕಟ್ಟಾಶಾಲೆ, ಮಳಲಿ, ಯಲಗೋಡಮನೆ, ಬೊಮ್ನಳ್ಳಿ ಮಾರ್ಗದಲ್ಲಿ ಸಾಗಿ ಕೊಳಗಿಬೀಸ್ ಬಳಿ ಮತ್ತೆ ಶಿರಸಿ ಕುಮಟಾ ಮುಖ್ಯ ರಸ್ತೆಗೆ ಸಂಪರ್ಕಿಸುವಂತೆ ಅಧಿಕಾರಿಗಳು ಸೂಚಿಸಿ, ಈ ಬಗ್ಗೆ ರಸ್ತೆ ಸೂಚನಾ ಫಲಕವನ್ನೂ ಅಳವಡಿಸಿದ್ದರು.
2020ರ ಮಳೆಗಾಲದಲ್ಲಿ ಶಿರಸಿ ಕುಮಟಾ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಉಂಟಾದಾಗ ವೇಗದೂತ ಬಸ್‌ಗಳು, ಸ್ಥಳೀಯ ಬಸ್‌ಗಳನ್ನೂ ಒಳಗೊಂಡಂತೆ ಎಲ್ಲ ವಾಹನಗಳೂ ಈ ಮಾರ್ಗದಲ್ಲಿಯೇ ಸಾಗಿದ್ದವು. ಅದುವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಈ ರಸ್ತೆ ಬೃಹತ್ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ. ಬೃಹತ್ ಹೊಂಡಗಳು ನಿರ್ಮಾಣವಾಗಿದೆ. ಕಳೆದ ಬೇಸಿಗೆಯಲ್ಲಿ ಹೆಗಡೆಕಟ್ಟಾರಸ್ತೆಯಿಂದ ಬನ್ನಿಕಟ್ಟಾಶಾಲೆವರೆಗಿನ ಒಂದು ಕಿಮೀ ಡಾಂಬರೀಕರಣ ಮಾಡಲಾಗಿದೆ. ಆದರೆ, ಅಲ್ಲಿಂದ ಮುಂದಿನ ನಾಲ್ಕು ಕಿಮಿ ರಸ್ತೆ ಕೇಳುವವರೇ ಇಲ್ಲವಾಗಿದೆ.
ಸ್ಥಳೀಯ ಬೈಕ್ ಸವಾರರು, ಪ್ರಯಾಣಿಕರು ರಸ್ತೆ ದುಸ್ತಿತಿ ನೋಡಲಾಗದೇ ತಾವೇ ಹೊಂಡಗಳಿಗೆ ಮಣ್ಣು ತುಂಬಿಕೊಂಡಿದ್ದಾರೆ. ಈ ವರ್ಷವಾದರೂ ಈ ರಸ್ತೆ ಮರು ಡಾಂಬರೀಕರಣ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.
BIG 3: ರಸ್ತೆಗಳಿಲ್ಲ, ಡೋಲಿಯೇ ಆ್ಯಂಬುಲೆನ್ಸ್, ನೋ ನೆಟ್‌ವರ್ಕ್, ಚಾಮರಾಜನಗರದ ಹಳ್ಳಿಗಳ ವ್ಯಥೆ
ಕುಮಟಾ ರಸ್ತೆಗೆ ಬದಲಿ ಮಾರ್ಗವಾಗಿ ಬಳಸಿಕೊಂಡ ಬಳಿಕ ರಸ್ತೆ ಸ್ಥಿತಿ ಹದಗೆಟ್ಟಿದೆ. ಆ ಬಳಿಕ ನಿರ್ವಹಣೆ ಮಾಡಿಯೇ ಇಲ್ಲ. ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದೇವೆ.
ದೊಮ್ಮು ಗೌಡ ಮಳಲಿ, ಸ್ಥಳೀಯ ನಿವಾಸಿ.
