ತುಮಕೂರು/ಶಿರಾ (ನ.04) : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಬಳಸಲಾಗಿರುವ ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

ಶಿರಾದಲ್ಲಿ ಮತದಾನದ ಮಾಡಿದ ನಂತರ ಮಾತನಾಡಿದ ಅವರು, ಇದು ನನಗೆ 10ನೇ ಚುನಾವಣೆಯಾಗಿದೆ. ಆದರೆ, ಹಿಂದೆಂದೂ ಕಾಣದಂತಹ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಪಕ್ಷವೊಂದರ ಏಜೆಂಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದೂಡಿಕೆಯಾಯ್ತು ಚುನಾವಣಾ ಫಲಿತಾಂಶದ ಡೇಟ್ : ವಿರುದ್ಧ ಅರ್ಜಿ ..

ಈಗಾಗಲೇ ನಾನು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಸನ ಮೂಲದವರು ಮತದಾರರಿಗೆ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಜನರು ಅವರನ್ನು ಕೂಡಿ ಹಾಕಿದ್ದರು. ಆದರೆ ಮಾನವೀಯತೆ ದೃಷ್ಟಿಯಿಂದ ಅವರನ್ನು ಬಿಟ್ಟು ಕಳುಹಿಸಲಾಗಿದೆ. ಇನ್ನು ಪೊಲೀಸರು ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂತಹ ಚುನಾವಣೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಕಿಡಿಕಾರಿದರು.