ಗ್ರಾಮದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ಸಾರ್ವಜನಿಕವಾಗಿ ಯುವಕನೋರ್ವನ ಬೆನ್ನು ಕಚ್ಚಿ ಹಲ್ಲೆ ನಡೆಸಿ ವಿಕೃತ ವರ್ತನೆ ತೋರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ : ಗ್ರಾಮದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ಸಾರ್ವಜನಿಕವಾಗಿ ಯುವಕನೋರ್ವನ ಬೆನ್ನು ಕಚ್ಚಿ ಹಲ್ಲೆ ನಡೆಸಿ ವಿಕೃತ ವರ್ತನೆ ತೋರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ.

ಶಿಂಧೋಗಿ ಗ್ರಾಮ ಪಂಚಾಯತಿ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಹಾಗೂ ಆತನ ಸಂಬಂಧಿಗಳು, ಗ್ರಾಮದ ನಿವಾಸಿ ಹನುಮಂತ ಕರೀಕಟ್ಟಿ (30) ಎಂಬ ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಬೆನ್ನು ಕಚ್ಚಿರುವುದಾಗಿ ಆರೋಪಿಸಲಾಗಿದೆ. ಘಟನೆ ಪಿಡಿಒ ಸಮ್ಮುಖದಲ್ಲೇ ನಡೆದಿದೆ ಎನ್ನುವುದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಚರಂಡಿ ನೀರಿನ ಸಮಸ್ಯೆಯನ್ನು ಪಿಡಿಒ ಗಮನಕ್ಕೆ ತಂದಿದ್ದ

ಹನುಮಂತ ಕರೀಕಟ್ಟಿ ಶಾಲೆ ಪಕ್ಕದ ರಸ್ತೆಯ ಮೇಲೆ ನಿಂತಿರುವ ಚರಂಡಿ ನೀರಿನ ಸಮಸ್ಯೆಯನ್ನು ಪಿಡಿಒ ಗಮನಕ್ಕೆ ತಂದಿದ್ದ. ರಸ್ತೆ ಮೇಲೆ ನಿಂತ ಚರಂಡಿ ನೀರಿನಲ್ಲೇ ಮಕ್ಕಳು ಶಾಲೆ ಹಾಗೂ ಅಂಗನವಾಡಿಗೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾನೆ.

ಈ ವಿಚಾರದ ಹಿನ್ನೆಲೆಯಲ್ಲಿ ಕೋಪಗೊಂಡ ಪಂಚಾಯತಿ ಅಧ್ಯಕ್ಷ ದುರ್ಗಪ್ಪ ಟೋಪೋಜಿ, ದೂರುದಾರನ ಮೇಲೆ ಚಪ್ಪಲಿಯಿಂದ ಹಲ್ಲೆಗೈದು, ಬೆನ್ನು ಕಚ್ಚಿ ವಿಕೃತ ವರ್ತನೆ ತೋರಿದ್ದಾನೆ ಎಂದು ಹನುಮಂತ ಆರೋಪಿಸಿದ್ದಾನೆ. ಅಧ್ಯಕ್ಷನೊಂದಿಗೆ ಆತನ ಸಂಬಂಧಿಗಳೂ ಸೇರಿ ಪಿಡಿಒ ಮುಂದೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಆರೋಪಿಗಳು ಹನುಮಂತನ ಮನೆಗೆ ನುಗ್ಗಿ, ಆತನ ತಾಯಿ ಹಾಗೂ ವೃದ್ಧ ಅಜ್ಜಿಯ ಮೇಲೂ ಬಡಿಗೆ ಮತ್ತು ಸಲಕಿಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಹನುಮಂತನ ತಾಯಿಯ ಮಂಗಳಸೂತ್ರವನ್ನು ಕಿತ್ತುಹಾಕಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದ್ವೇಷ

ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ನಡೆದಿದ್ದ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ದ್ವೇಷ ಸಾಧಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ಹನುಮಂತ ದೂರಿದ್ದಾರೆ.

ಹಲ್ಲೆಯಲ್ಲಿ ಗಾಯಗೊಂಡ ಹನುಮಂತ ಹಾಗೂ ವೃದ್ಧೆಯನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.