ಹೊಸಕೋಟೆ (ಡಿ.07):  ಹೊಸಕೋಟೆ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶರತ್‌ ಬಚ್ಚೇಗೌಡ   ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕಾಣಿಸಿಕೊಂಡಿದ್ದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಸ್ವತಂತ್ರವಾಗಿ ಗೆಲವು ಸಾಧಿಸಿರುವ ಶರತ್‌ ಬಚ್ಚೇಗೌಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರರು ಹೌದು. ಆದರೆ ಶರತ್‌ ಬಚ್ಚೇಗೌಡ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಕಾಂಗ್ರೆಸ್‌ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದ್ದಂತು ನಿಜ. ಆದರೆ ಗ್ರಾಪಂ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ ಶಾಸಕರಾದ ಭೈರತಿ ಸುರೇಶ್‌, ಕೈಷ್ಣಭೈರೇಗೌಡ ಸೇರಿದಂತೆ ಕಾಂಗ್ರೆಸ್‌ ನಾಯಕರ ನಡುವೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

'ನಿಷ್ಠಾ​ವಂತ​ರನ್ನೂ ಉಳಿ​ಸಿ​ಕೊ​ಳ್ಳ​ದ​ ದಳ​ಪತಿ : ಈ ಕಾರಣಕ್ಕೆ ಬಿಟ್ಟು ಹೋದರು' ..

ಎಂಟಿಬಿಗೆ ಟಕ್ಕರ್‌ ಕೊಡಲು ಸಿದ್ಧತೆ:  ಶಾಸಕ ಶರತ್‌ ಬಚ್ಛೇಗೌಡ ಹಾಗೂ ಕಾಂಗ್ರೆಸ್‌ ನಾಯಕರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಎರಡೂ ಬಣದವರೂ ಮೈತ್ರಿ ಮಾಡಿಕೊಂಡು ಡಿ.22ರಂದು ಹೊಸಕೋಟೆ ತಾಲೂಕಿನ 26 ಗ್ರಾಪಂಗಳಿಗೆ ನಡೆಯುವ ಚುನಾವಣೆಯಲ್ಲಿ ಎಂಎಲ್ಸಿ ಎಂಟಿಬಿ ನಾಗರಾಜ್‌ ಅವರಿಗೆ ಟಕ್ಕರ್‌ ಕೊಡಲು ಕೊಡಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ವಾರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೊಸಕೋಟೆಯಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಡೆಸಿದ ನಂತರ ವಿಪಕ್ಷಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಲ್ಲದೆ ಗ್ರಾಪಂ ಚುನಾವಣೆ ಬಳಿಕ ಶಾಸಕ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.