ಚಿತ್ರದುರ್ಗ: ಪಕ್ಷಿಗಳ ಹಿತ ಕಾಪಾಡಲು ಜನರು ಕೈಜೋಡಿಸಬೇಕು, ಶಾಂತವೀರ ಶ್ರೀ
ಪ್ರತಿಯೊಬ್ಬರು ದಿನದ ಐದು ನಿಮಿಷವನ್ನು ಪಕ್ಷಿಗಳ ಹಿತ ಕಾಯಲು ಮೀಸಲಿಡಬೇಕಿದೆ. ಈ ಮೂಲಕ ಇಡೀ ರಾಜ್ಯಾದ್ಯಂತ ಪಕ್ಷಿಗಳ ಹಿತವನ್ನು ಕಾಪಾಡಲು ಜನರು ಕೈಜೋಡಿಸಬೇಕಿದೆ. ಬರಗಾಲದಲ್ಲಿ ಪಕ್ಷಿಗಳಿಗೆ ನೀರು, ಅಹಾರ ಕೊಡುವಂತಹ ಪುಣ್ಯದ ಕೆಲಸ ಇನ್ನೊಂದಿಲ್ಲ ಎಂದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಡಾ.ಶಾಂತವೀರ ಶ್ರೀಗಳು
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜ.03): ಪ್ರತಿ ವರ್ಷವೂ ಬರಗಾಲದ ಸಂದರ್ಭದಲ್ಲಿ ಹಕ್ಕಿ ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಅಹಾರ ಸಮಸ್ಯೆ ಕೋಟೆನಾಡಿನಲ್ಲಿ ಹೆಚ್ಚಾಗಿ ಉಲ್ಭಣವಾಗುತ್ತದೆ. ಆ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಡಾ.ಶಾಂತವೀರ ಶ್ರೀಗಳು ಹಕ್ಕಿಗಳ ಗೂಡಿಗೆ ನೀರು ಹಾಗೂ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನು ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡ್ತಿದೆ. ಇಂತಹ ಸಮಯದಲ್ಲಿ ಹಕ್ಕಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ಸಮಸ್ಯೆ ಹೆಚ್ಚು ಕಾಡ್ತಿದೆ. ಆದನ್ನ ಗಮನದಲ್ಲಿಟ್ಟುಕೊಂಡು ಶಾಂತವೀರ ಶ್ರೀಗಳು ಹೊಸದುರ್ಗ ಪಟ್ಟದ ತಮ್ಮ ಗುರುಪೀಠದ ಬಳಿ ಇರುವ ಮರಗಳಿಗೆ ಆಹಾರ ಹಾಗೂ ನೀರಿನ ಡಬ್ಬಿಗಳನ್ನು ಕಟ್ಟುವ ಮೂಲಕ ಪಕ್ಷಿಗಳ ನೆರವಿಗೆ ಧಾವಿಸಿದ್ದಾರೆ. ಒಂದು ಭಾಗದಲ್ಲಿ ಆಹಾರ, ಕಾಳು ಹಾಕುವ ಡಬ್ಬಿ ಹಾಗೂ ಒಂದು ಕಡೆ ನೀರು ಹಾಕುವ ಡಬ್ಬಿಯನ್ನು ಅಳವಡಿಸುವ ಮೂಲಕ ಮೂಕ ಪಕ್ಷಿಗಳ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.
ಪಬ್ಲಿಕ್ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ: ಸಚಿವ ಮಧು ಬಂಗಾರಪ್ಪ
ಸದ್ಯ ರಾಜ್ಯದಲ್ಲಿ ಹಾಗೂ ಜಿಲ್ಲೆಯಾದ್ಯಂತ ಸೂಕ್ತ ಮಳೆ ಬಾರದೇ ಜನರಿಗೆ ಎಷ್ಟು ಆಹಾರ ಹಾಗೂ ನೀರಿನ ಸಮಸ್ಯೆ ಆಗಿದಿಯೋ ಅದಕ್ಕಿಂತ ಹೆಚ್ಚು ಪ್ರಾಣಿ, ಪಕ್ಷಿಗಳಿಗೆ ನೀರು ಹಾಗೂ ಆಹಾರದ ಅಭಾವ ಹೆಚ್ಚಾಗಿದೆ. ಅದನ್ನರಿತು ಈ ಹೊಸವರ್ಷದ ಸಂದರ್ಭದಲ್ಲಿ ಹಕ್ಕಿ ಪಕ್ಷಿಗಳಿಗೆ ಏನಾದ್ರು ಅನುಕೂಲ ಆಗುವ ನಿಟ್ಟಿನಿಲ್ಲಿ ಈ ಕಾರ್ಯಕ್ಕೆ ಚಾಲನೆ ಕೊಡಲಾಯಿತು ಎಂದು ತಿಳಿಸಿದರು. ಜನರೆಲ್ಲರೂ ಹೊಸ ವರ್ಷಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡ್ತಾರೆ. ಆದ್ರೆ ನಾವು ವಿಶಿಷ್ಟ ಸಂಕಲ್ಪದೊಂದಿಗೆ ಆಚರಣೆ ಮಾಡಲು ಮುಂದಾಗಿದ್ದೀವಿ ಎಂದರು.
ಜಿಲ್ಲೆಯಾದ್ಯಂತ ಪ್ರತಿಯೊಬ್ಬರು ದಿನದ ಐದು ನಿಮಿಷವನ್ನು ಪಕ್ಷಿಗಳ ಹಿತ ಕಾಯಲು ಮೀಸಲಿಡಬೇಕಿದೆ. ಈ ಮೂಲಕ ಇಡೀ ರಾಜ್ಯಾದ್ಯಂತ ಪಕ್ಷಿಗಳ ಹಿತವನ್ನು ಕಾಪಾಡಲು ಜನರು ಕೈಜೋಡಿಸಬೇಕಿದೆ. ಬರಗಾಲದಲ್ಲಿ ಪಕ್ಷಿಗಳಿಗೆ ನೀರು, ಅಹಾರ ಕೊಡುವಂತಹ ಪುಣ್ಯದ ಕೆಲಸ ಇನ್ನೊಂದಿಲ್ಲ ಎಂದರು. ಇನ್ನೂ ಈ ಸಂದರ್ಭದಲ್ಲಿ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಶ್ರೀ ಹಾಗೂ ಕೆಲ್ಲೋಡು ಕನಕ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು ಹಾಜರಿದ್ದರು. ಎಲ್ಲರೂ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿ ಪಕ್ಷಿಗಳ ಹಿತ ಕಾಪಾಡಿ ಎಂದು ಸಲಹೆ ನೀಡಿದರು.