ಆಸೆ ಇತ್ತು, ಆದ್ರೆ ಹುದ್ದೆ ಸಿಗಲಿಲ್ಲ : ಕೇಂದ್ರದ ನಡೆಗೆ ಹಿರಿಯ ಬಿಜೆಪಿಗರೋರ್ವರ ಬೇಸರ
ಕೇಂದ್ರದಿಂದ ರಾಜ್ಯವನ್ನು ಕಡೆಗಣಿಸಲಾಗಿದೆ. ಮೋದಿ ಸರ್ಕಾರ ಬಂದ ನಂತರ ಯಾವುದೇ ಉನ್ನ ಹುದ್ದೆಗಳನ್ನು ರಾಜ್ಯಕ್ಕೆ ನೀಡಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡರೋರ್ವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಿವಮೊಗ್ಗ [ಡಿ.19]: ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ಸಿಗರು ಧರ್ಮ ಮತ್ತು ದೇಶದ್ರೋಹ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ್ ಮೂರ್ತಿ ತಮಗೆ ರಾಜ್ಯಪಾಲ ಹುದ್ದೆ ಸಿಗದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನನಗೆ ರಾಜ್ಯಪಾಲನಾಗಬೇಕೆಂಬ ಆಸೆಯಿತ್ತು. ಆದರೆ ಅವಕಾಶ ಬಂದಿಲ್ಲ ಎಂದರು.
ನಾನು ಸಕ್ರಿಯ ರಾಜಕಾರಣ ದಿಂದ ನಿವೃತ್ತನಾಗುವ ಕುರಿತು ವರಿಷ್ಠರಿಗೆ ತಿಳಿಸಿದ್ದೆ. ಆ ಸಂದರ್ಭದಲ್ಲಿ ರಾಜ್ಯಪಾಲರ ಹುದ್ದೆಯನ್ನು ನನಗೆ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿತು. ಆದರೆ ಆ ಸುದ್ದಿ ಹಾಗೇ ಕರಗಿ ಹೋಯ್ತು. ನಾನು ಮಾತ್ರವಲ್ಲ, ರಾಜ್ಯದಲ್ಲಿ ಸಾಕಷ್ಟು ಮಂದಿ ಅರ್ಹರಿದ್ದರೂ ರಾಜ್ಯದಿಂದ ಯಾರನ್ನೂ ಪರಿಗಣಿಸಿಲ್ಲ. ನನಗೆ ಉನ್ನತ ಹುದ್ದೆ ಬೇಕು ಎಂದು ಕೇಳುವುದಕ್ಕೆ ಸಂಕೋಚವಾಗುತ್ತದೆ ಎಂದರು.
ನನ್ನನ್ನು ಬಿಟ್ಟು ಬೇರೆ ಯಾರನ್ನಾದರೂ ಈ ಸ್ಥಾನಕ್ಕೆ ಪರಿಗಣಿಸಬಹುದಿತ್ತು ಎಂದು ಈ ವೇಳೆ ಶಂಕರ್ ಮೂರ್ತಿ ಹೇಳಿದರು.
ವಿಧಾನಸಭೆಯಲ್ಲಿ ವಿಪಕ್ಷದ ಜೊತೆ ಬಿಜೆಪಿ ಶಾಸಕರ ಪ್ರತಿಭಟನೆ!..
ಕಳೆದ 6 ವರ್ಷದಿಂದ ಈಚೆಗೆ ಕರ್ನಾಟಕದವರಿಗೆ ರಾಜ್ಯಪಾಲರ ಸ್ಥಾನಸೇರಿದಂತೆ ಯಾವ ಉನ್ನತ ಹುದ್ದೆ ದೊರೆತಿಲ್ಲವೆಂದು ಮಾಜಿ ಸಭಾಪತಿ ಡಿ. ಎಚ್. ಶಂಕರ ಮೂರ್ತಿ ಬೇಸರ ವ್ಯಕ್ತಪಡಿಸಿದರು. ವಾಜಪೇಯಿ ಪ್ರಧಾನಿ ಆಗಿದ್ದಾಗ ರಾಮಾಜೋಯಿಸ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು.
ಆದರೆ ಮೋದಿ ಸರ್ಕಾರ ಬಂದ ನಂತರ ಕಳೆದ 6 ವರ್ಷಗಳಲ್ಲಿ ಯಾವ ಕರ್ನಾಟಕದವರನ್ನೂ ರಾಜ್ಯಪಾಲರನ್ನಾಗಿ ನೇಮಿಸಿಲ್ಲ. ಕರ್ನಾಟಕದಿಂದ ಸಂಸತ್‌ಗೆ 25 ಸಂಸದರನ್ನು ಬಿಜೆಪಿ ಆರಿಸಿ ಕಳುಹಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಪಕ್ಷಕ್ಕೆ ಪ್ರಬಲವಾದ ಶಕ್ತಿ ತುಂಬಿದೆ. ಅದೂ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ನೀಡಿದ ರಾಜ್ಯವೆಂದರೆ ಕರ್ನಾಟಕ. ಆದರೆ ಯಾವುದೇ ಉನ್ನತ ಸ್ಥಾನಮಾನ ಮಾತ್ರ ಸಿಕ್ಕಿಲ್ಲ ಎಂದರು.