ಹುಬ್ಬಳ್ಳಿ(ಫೆ.11): ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿಗಳ ಮಾತುಗಳಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ದಿಂಗಾಲೇಶ್ವರ ಸ್ವಾಮೀಜಿಗಳೇ ಕಾರಣ ಎಂದು ಕೆಎಲ್‌ಇ ಸಂಸ್ಥೆಯ ಸ್ಥಳೀಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಆಸ್ತಿಯನ್ನು ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿರುವ ವಿಷಯದಲ್ಲಿ ಮಠದ ಉನ್ನತ ಸಮಿತಿ ಸದಸ್ಯರ ಪಾತ್ರವಿಲ್ಲ. ಈ ಹಿಂದಿನ ಸ್ವಾಮೀಜಿಗಳ ಆಶಯದಂತೆ ಕೆಎಲ್‌ಇ ಸಂಸ್ಥೆಗೆ ಜಮೀನು ನೀಡಲಾಗಿದೆ. ಸದ್ಯದ ಪೀಠಾಧಿಪತಿಗಳು ಜಮೀನನ್ನು ದಾನವಾಗಿಯೇ ನೀಡಿದ್ದಾರೆ. ಅಗತ್ಯ ದಾಖಲೆಗಳು ನಮ್ಮ ಬಳಿ ಇವೆ ಎಂದರು.

ಸಮಿತಿ ಸಭೆ:

ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿ ಸಭೆಯನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರವಾಗಿ ಸಭೆ ಕರೆಯಲಾಗುವುದು ಎಂದು ನುಡಿದ ಅವರು, ಲಿಂಗಾಯತ ಸಮುದಾಯಕ್ಕೆ ಹಾಗೂ ಉತ್ತರ ಕರ್ನಾಟಕದ ಜನತೆಯ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಕೆಎಲ್‌ಇ ಸಂಸ್ಥೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ನಿರ್ಮಿಸುತ್ತಿದೆ ಎಂದರು.

ಹುಬ್ಬಳ್ಳಿ: ದಾನವಾಗಿ ನೀಡಿದ ಮಠದ ಜಮೀನು ಮರಳಿಸುವ ಪ್ರಶ್ನೆಯೇ ಇಲ್ಲ, ಕೋರೆ

ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿಗಳಿಂದ ತಿಂಗಳು ಕಾಲ ಪ್ರವಚನ ಕೊಡಿಸಲಾಗಿದೆ. ಆದರೆ, ಸ್ವಾಮೀಜಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರಿಂದ ಸಾಕಷ್ಟು ನೋವಾಗಿದೆ. ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ದಿಂಗಾಲೇಶ್ವರ ಸ್ವಾಮೀಜಿಗಳೇ ನೇರ ಹೊಣೆ ಎಂದರು.

ರುದ್ರಮುನಿ ಸ್ವಾಮೀಜಿ ಇತ್ತೀಚೆಗೆ ಭೇಟಿಯಾದಾಗ ಪೀಠಾಧಿಪತಿ ಕುರಿತು ಚರ್ಚೆಯಾಗಿದೆಯಂತೆ ಹೌದಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಇಲ್ಲ ಅಂತಹ ಚರ್ಚೆಗಳು ಆಗಿಲ್ಲ. ನಾನೂ ಅವತ್ತು ಬೆಂಗಳೂರಿನಿಂದ ಬಂದು ಮಠಕ್ಕೆ ತೆರಳಿ ನಮಸ್ಕರಿಸಿ ವಾಪಸ್‌ ಬಂದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.