ಹುಬ್ಬಳ್ಳಿ(ಫೆ.11): ಕೆಎಲ್‌ಇ ಸಂಸ್ಥೆಗೆ ಮೂರುಸಾವಿರ ಮಠ ವೈದ್ಯಕೀಯ ಕಾಲೇಜ್‌ ಹಾಗೂ ಆಸ್ಪತ್ರೆ ನಿರ್ಮಿಸಲು ಜಮೀನನ್ನು ದಾನವಾಗಿ ನೀಡಿದೆ. ಕಾನೂನುಬದ್ಧವಾಗಿಯೇ ಈ ಜಮೀನನ್ನು ದಾನವಾಗಿ ಪಡೆಯಲಾಗಿದೆ. ಅದನ್ನು ಮರಳಿ ಕೊಡುವ ಪ್ರಶ್ನೆಯೇ ಇಲ್ಲ. ಇನ್ನು ಒಂದೂವರೆ ವರ್ಷದೊಳಗೆ ವೈದ್ಯಕೀಯ ಕಾಲೇಜ್‌ ಕಾಮಗಾರಿ ಪೂರ್ಣಗೊಳಿಸಿ ಪ್ರಾರಂಭಿಸಲಾಗುವುದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಮಠದ ಆಸ್ತಿ ಮಠಕ್ಕೆ ಕೊಡಿ ಎಂದು ಹೋರಾಟ ನಡೆಸುತ್ತಿರುವ ದಿಂಗಾಲೇಶ್ವರ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ, ದಿಂಗಾಲೇಶ್ವರ ಶ್ರೀಗಳು ಸಂಸ್ಥೆಗೆ ಇದೇ ರೀತಿ ಧಕ್ಕೆ ತರುವ ಕೆಲಸ ಮುಂದುವರಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ರವಾನಿಸಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಹಿಂದಿನ ಶ್ರೀಗಳಾದ ಡಾ.ಗಂಗಾಧರ ಸ್ವಾಮೀಜಿ ಅವರೇ ಸ್ವ ಇಚ್ಛೆಯಿಂದ ದಾನ ಪತ್ರ ಬರೆದುಕೊಟ್ಟಿದ್ದಾರೆ. ಚಾರಿಟಿ ಕಮಿಷನ್‌ ಎದುರಿಗೆ ದಾನ ಮಾಡಿದ್ದಾರೆ. ಈಗಿನ ಸ್ವಾಮೀಜಿ ಅದನ್ನು ರಜಿಸ್ಪ್ರೇಷನ್‌ ಮಾಡಿಕೊಟ್ಟಿದ್ದಾರೆ ಅಷ್ಟೇ. ಹಿಂದಿನ ಶ್ರೀಗಳ ಆಶಯದಂತೆ ನಾವು ದಾನ ಪಡೆದು ಮೆಡಿಕಲ್‌ ಕಾಲೇಜ್‌ ನಿರ್ಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಹಾದಿ ಸುಗಮ?

ಆ ಭೂಮಿ ವಿಷಯದಲ್ಲಿ ಅಸುಂಡಿ ಕುಟುಂಬ ಹಾಗೂ ಮಠದ ಮಧ್ಯೆ ವ್ಯಾಜ್ಯವೂ ಇತ್ತು. ಅದನ್ನು ಬಗೆಹರಿಸಿದ್ದೇವೆ. ಒಟ್ಟು 23.17 ಎಕರೆ ಮಠದ ಜಮೀನು ದಾನವಾಗಿ ಕೆಎಲ್‌ಇ ಸಂಸ್ಥೆಗೆ ಪಡೆಯಲಾಗಿದೆ. ಇದರೊಂದಿಗೆ ಅಕ್ಕಪಕ್ಕದ 9 ಎಕರೆ ಜಮೀನನ್ನು ನಾವು ಖರೀದಿಸಿ ಅಲ್ಲಿ ಭೂಮಿಪೂಜೆ ನೆರವೇರಿಸಿ ಕಾಲೇಜ್‌ ನಿರ್ಮಾಣ ಮಾಡಲಾಗುತ್ತಿದೆ. ದಾನಪತ್ರವಾಗಿರುವುದೆಲ್ಲವೂ ಹಿಂದಿನ ಶ್ರೀಗಳು ಇದ್ದಾಗಲೇ ಮಾಡಿದ್ದು ಎಂದು ಸ್ಪಷ್ಟಪಡಿಸಿದರು.

ಮೂರುಸಾವಿರ ಮಠದ 500 ಕೋಟಿ ಬೆಲೆ ಬಾಳುವ ಜಮೀನನ್ನು ಕೆಎಲ್‌ಇ ಸಂಸ್ಥೆಗೆ ಪರಭಾರೆ ಮಾಡಲಾಗಿದೆ. ಅದನ್ನು ಮರಳಿಸಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಆಗ್ರಹಿಸುತ್ತಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು. ಕಾನೂನುಬದ್ಧವಾಗಿಯೇ ಸಂಸ್ಥೆಯ ಈ ವಿಷಯದಲ್ಲಿ ಕೆಲಸ ಮಾಡಿದೆ. ದಾನವಾಗಿ ಈ ಭೂಮಿಯನ್ನು ಪಡೆದಿದೆ. ಅದನ್ನು ಮರಳಿಸುವ ಪ್ರಶ್ನೆಯೇ ಇಲ್ಲ. 600 ಕೋಟಿ ವೆಚ್ಚದಲ್ಲಿ ಅಲ್ಲಿ ವೈದ್ಯಕೀಯ ಕಾಲೇಜ್‌ ಹಾಗೂ ಆಸ್ಪತ್ರೆ ನಿರ್ಮಿಸುವ ಕಾರ್ಯ ನಡೆದಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಅಲ್ಲಿ ಆಸ್ಪತ್ರೆ ಹಾಗೂ ಕಾಲೇಜ್‌ ತಲೆ ಎತ್ತಿ ಕಾರ್ಯಾರಂಭ ಮಾಡಲಿದೆ ಎಂದರು.

ಅಷ್ಟಕ್ಕೂ ಈ ದಿಂಗಾಲೇಶ್ವರ ಶ್ರೀಗಳು ಯಾರು ಎಂಬುದೇ ನಮಗೆ ಗೊತ್ತಿಲ್ಲ. ಈ ವರೆಗೂ ಅವರ ಮುಖವನ್ನೇ ನಾನು ನೋಡಿಲ್ಲ ಎಂದು ನುಡಿದ ಅವರು, ಕೆಎಲ್‌ಇ ಸಂಸ್ಥೆಗೆ 15 ವರ್ಷಗಳ ಹಿಂದೆಯೆ ದಾನವಾಗಿ ಕೊಟ್ಟಿದ್ದು. ಇಷ್ಟುದಿನ ದಿಂಗಾಲೇಶ್ವರ ಶ್ರೀಗಳು ಎಲ್ಲಿ ಹೋಗಿದ್ದರು? ನಾವು ಈ ಹಿಂದೆ ಹಲವಾರು ಬಾರಿ ವೈದ್ಯಕೀಯ ಕಾಲೇಜ್‌ ನಿರ್ಮಿಸುವುದನ್ನು ಹೇಳಿದ್ದುಂಟು. ದಿಂಗಾಲೇಶ್ವರ ಶ್ರೀಗಳಿಗೂ ಮೂರುಸಾವಿರ ಮಠಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಕೆಎಲ್‌ಇ ಸಂಸ್ಥೆಗೆ ತನ್ನದೇ ಆದ ಇತಿಹಾಸವಿದೆ. ಇದೇ ರೀತಿ ಸಂಸ್ಥೆ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ, ಮುಂದೆ ನಾವು ಕಾನೂನು ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.

ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕದ ಜನತೆಯ ಆರೋಗ್ಯದ ದೃಷ್ಟಿಯಿಂದ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳ ಭವಿಷ್ಯದ ದೂರದೃಷ್ಟಿಯೊಂದಿಗೆ ಈ ಹಿಂದಿನ ಸ್ವಾಮೀಜಿ ಕೆಎಲ್‌ಇಗೆ ಜಮೀನು ದಾನವಾಗಿ ನೀಡಿದ್ದಾರೆ ಎಂದರು.

ಮೂರುಸಾವಿರ ಮಠದ ಅಸ್ತಿ ಮಾರಾಟ ಮಾಡಿಲ್ಲ: ಮೂಜಗು

ದಿಂಗಾಲೇಶ್ವರ ಸ್ವಾಮೀಜಿಗಳನ್ನು ಮೂರುಸಾವಿರ ಮಠದ ಪೀಠಾಧಿಪತಿಗಳನ್ನಾಗಿಸುವುದು ಸಮಾಜದ ನಿರ್ಧಾರ. ಯಾವುದೋ ಉದ್ದೇಶವನ್ನಿಟ್ಟುಕೊಂಡು ಸಮಾಜವನ್ನು ಕೆಎಲ್‌ಇ ಸಂಸ್ಥೆಯ ವಿರುದ್ಧ ಎತ್ತಿಕಟ್ಟುವುದು ಸೂಕ್ತವಲ್ಲ. ದಿಂಗಾಲೇಶ್ವರ ಶ್ರೀಗಳು ಲಿಂಗಾಯತ ಸಮುದಾಯದ ಮುಖಂಡರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ. ಇದನ್ನು ಬಿಡಬೇಕು ಎಂದರು. ಕೆಎಲ್‌ಇ ಸಂಸ್ಥೆಯ ಸ್ಥಳೀಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ಟಿಕೆಟ್‌ ನೀಡಿದರೆ ಬೇಡ ಎನ್ನಲ್ಲ...

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಭಾಕರ ಕೋರೆ, ಬೆಳಗಾವಿ ಉಪ ಚುನಾವಣೆಗೆ ಪಕ್ಷ ಸ್ಪರ್ಧಿಸುವಂತೆ ಟಿಕೆಟ್‌ ನೀಡಿದರೆ ಬೇಡ ಎನ್ನಲ್ಲ. ಇನ್ನೂ ಯಂಗ್‌ ಆಗಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ನುಡಿದರು.