ನವಲಗುಂದ/ ಹುಬ್ಬಳ್ಳಿ[ಡಿ.30]: ಬಾಲಕಿಗೆ 10 ರು. ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶನಿವಾರ ಸಾರ್ವಜನಿಕರಿಂದ ಹಲ್ಲೆಗೊಳಗಾಗಿ ನವಲಗುಂದ ಆಸ್ಪತ್ರೆಯಲ್ಲಿದ್ದ ಫಕ್ರುದ್ದೀನ್ ನದಾಫಗೆ ಬಾಲಕಿಯ ಸಂಬಂಧಿ ಭಾನುವಾರ ಮಧ್ಯಾಹ್ನ ಚಾಕುವಿನಿಂದ ಇರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಕರೆತಂದು ದಾಖಲಿಸಿದ ವೇಳೆ ಆತ ಮೃತಪಟ್ಟಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂತೋಷ ಹುಲಗಪ್ಪ ವಡ್ಡರ (28) ಚಾಕು ಇರಿದಿದ್ದಾನೆ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನವಾಗಿದೆ. ಭಾನುವಾರ ಮಧ್ಯಾಹ್ನ 2.30 ರ ವೇಳೆಗೆ ನವಲಗುಂದ ಆಸ್ಪತ್ರೆಗೆ ಹೊರ ರೋಗಿ ಸೋಗಿನಲ್ಲಿ ಬಂದ ಸಂತೋಷ, ಬಳಿಕ ವೃದ್ಧನಿದ್ದ ಚಿಕಿತ್ಸಾ ಕೊಠಡಿಗೆ ತೆರಳಿ ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ. ನೋವಿನಿಂದ ಫಕ್ರುದ್ದೀನ್ ಕೂಗಾಟ ಆರಂಭಿಸಿದಾಗ ಆತನ ಭದ್ರತೆಗಿದ್ದ ಪೊಲೀಸರು ದೌಡಾಯಿಸಿದ್ದಾರೆ. ಅವರಲ್ಲಿ ಒಬ್ಬರ ಎಡಗೈಗೂ ಸಂತೋಷ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ರಕ್ತದ ಮಡುವಲ್ಲಿ ಬಿದ್ದ ಫಕ್ರುದ್ದೀನ್‌ಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಕಿಮ್ಸ್‌ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದ ವೃದ್ಧ ಸಂಜೆ ವೇಳೆಗೆ ಮೃತಪಟ್ಟಿದ್ದಾನೆ. 

ಆಗಿದ್ದೇನು?: 

ಪಟ್ಟಣದ ಬಸವೇಶ್ವರ ನಗರದ ಫಕ್ರುದ್ದಿನ್ ನದಾಫ್ (58) ಅಪ್ರಾಪ್ತೆಗೆ 10 ರು. ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ಶನಿವಾರ ಬೆಳಕಿಗೆ ಬಂದಿತ್ತು. ಈತ ಬಾಲಕಿಯನ್ನು ಮನೆಯೊಳಗೆ ಕರೆದೊಯ್ದ ವೇಳೆಯೇ ಹಿಡಿದ ಸ್ಥಳೀಯರು ಕಂಬಕ್ಕೆ ಕಟ್ಟಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಥಳಿತದಿಂದ ಗಾಯಗೊಂಡಿದ್ದ ಫಕ್ರುದ್ದೀನ್‌ನನ್ನು ಶನಿವಾರ ಸಂಜೆ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈತನ ರಕ್ಷಣೆಗೆ ಮೂವರು ಪೊಲೀಸರೂ ಇದ್ದರು. ಇವರ ಕಣ್ತಪ್ಪಿಸಿ ಮಧ್ಯಾಹ್ನ ಸಂತೋಷ ಚಾಕು ಇರಿದಿದ್ದಾನೆ

ಬಾಲಕಿಯ ಸಂಬಂಧಿ ಯುವಕ ವೃದ್ಧನಿಗೆ ಚಾಕು ಇರಿದಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಆತ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಟಿಕಾ ಕಟಿಯಾರ್ ತಿಳಿಸಿದ್ದಾರೆ.