ಬೆಂಗಳೂರು (ಫೆ.28):  ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಥಮ ದರ್ಜೆ ಗುಮಾಸ್ತನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಹದೇಶ್ವರ ನಗರದ ನಿವಾಸಿ 56 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಥಮ ದರ್ಜೆ ಗುಮಾಸ್ತ ಕೆಂಪರಾಜು (57) ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳೆ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಸಮಸ್ಯೆ ಬಗ್ಗೆ ಆರೋಪಿ ಬಳಿ ಮಾಹಿತಿ ಹಂಚಿಕೊಂಡಿದ್ದರು. ಮಹಿಳೆಗೆ ಹಣಕಾಸಿನ ತೊಂದರೆ ಇರುವುದನ್ನು ಅರಿತ ಕೆಂಪರಾಜು, ಹಣದ ಏರ್ಪಾಡು ಮಾಡಿ, ಚೆಕ್ಕನ್ನು ಪಡೆದಿದ್ದ. ಇದಾದ ಬಳಿಕ ಕೆಂಪರಾಜು ದೂರುದಾರ ಮಹಿಳೆ ಜತೆ ಸಲುಗೆ ಬೆಳೆಸಲು ಪ್ರಯತ್ನಿಸಿದ್ದ. ಯಾರೂ ಇಲ್ಲದ ಸಮಯದಲ್ಲಿ ಮಹಿಳೆ ಬಳಿ ಬಂದು ಅಶ್ಲೀಲವಾಗಿ ಮಾತನಾಡುತ್ತಿದ್ದ.

ಕೋರ್ಟ್ ಆವರಣದಲ್ಲಿ ವಕೀಲನ ಭೀಕರ ಕೊಲೆ ...

 ನೀನು ನನ್ನ ಜತೆ ಸಹಕರಿಸಬೇಕು ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದ ಮಹಿಳೆ ಆರೋಪಿಯೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದರು. ಮಹಿಳೆ ತನ್ನ ಬಳಿ ಮಾತನಾಡದೆ ಇರುವುದರಿಂದ ಆಕ್ರೋಶಗೊಂಡ ಆರೋಪಿ ಹೇಳಿದಂತೆ ಕೇಳದಿದ್ದರೆ ಜೀವ ತೆಗೆಯುತ್ತೇನೆ. ಜತೆಗೆ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.